Bengaluru City

ತ್ರಿಭಾಷಾ ಸೂತ್ರವನ್ನು ನಾವು ಒಪ್ಪಿದ್ದು, ಕನ್ನಡ ಕಡೆಗಣನೆ ಸಹಿಸಲ್ಲ: ಟಿ.ಎಸ್ ನಾಗಾಭರಣ

Published

on

Share this

ಬೆಂಗಳೂರು: ದಿವಂಗತ ಡಿ.ದೇವರಾಜು ಅರಸು ಅವರ ಸವಿನೆನಪಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ 2021ರ ಆಗಸ್ಟ್ 23, 24 ಹಾಗೂ 25 ರಂದು ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನದ ಅಂಗವಾಗಿ ಇಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿಗೆ ಭೇಟಿ ನೀಡಿದ ಪ್ರಾಧಿಕಾರದ ತಂಡ ಅಲ್ಲಿನ ಮುಖ್ಯಸ್ಥರನ್ನು ಭೇಟಿಯಾಗಿ ಕನ್ನಡ ಕಾಯಕ ವರ್ಷದ ಬಾರಿಸು ಕನ್ನಡ ಡಿಂಡಿಮವ ಅಭಿಯಾನಗಳ ಸರಣಿಯ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನದ ಮೂಲ ಆಶಯ ಮತ್ತು ಹಕ್ಕೊತ್ತಾಯವನ್ನು ವಿವರಿಸಿದರು.

ಆಡಳಿತ ವಲಯ ನೀಡಿದ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು, ಸದರಿ ವಿಮಾನ ನಿಲ್ದಾಣ ಇತ್ತೀಚೆಗಷ್ಟೇ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದು ಗುರುತಿಸಲ್ಪಟ್ಟಿದೆ ಈ ಕುರಿತು ಅಭಿನಂದಿಸಿದರು. ಕರ್ನಾಟಕದಲ್ಲಿ ಬೇರೂರಿ ಕನ್ನಡವನ್ನು ಗಟ್ಟಿ ಮಾಡಿ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಎಲ್ಲೆಡೆ ಪಸರಿಸಿ ವಿಶ್ವಮಾನವರಾಗಿ ಎಂದು ಹರಸಿದರು.

ದಿಕ್ಸೂಚಿ ಫಲಕಗಳಲ್ಲಿ, ದೇಶೀಯ ವಿಮಾನಗಳ ಧ್ವನಿ ಪ್ರಕಟಣೆಗಳಲ್ಲಿ, ಸಿಬ್ಬಂದಿಯ ವ್ಯವಹಾರದಲ್ಲಿ, ಗುರುತಿನ ಚೀಟಿಗಳಲ್ಲಿ, ಕಡ್ಡಾಯವಾಗಿ ಕನ್ನಡ ಬಳಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕರ್ನಾಟಕದಲ್ಲಿದೆ ಎಂದಾದರೆ ಅಲ್ಲಿ ಸಂಪೂರ್ಣ ಕನ್ನಡ ವಾತಾವರಣ ಇರಬೇಕು. ಇದು ಕನ್ನಡ ನೆಲ, ತ್ರಿಭಾಷಾ ಸೂತ್ರವನ್ನು ನಾವು ಒಪ್ಪಿದ್ದೇವೆ. ಹಾಗಂತ ಕನ್ನಡ ಕಡೆಗಣನೆ ಸಹಿಸಲ್ಲ ಎಂದು ಅವರು ಮಾಡಿಕೊಳ್ಳಲೇಬೇಕಾದ ಬದಲಾವಣೆಗಳನ್ನು ಸೂಚಿಸಿದ ಸದರಿ ಬದಲಾವಣೆಗಳಾಗಿವೇ ಇಲ್ಲವೇ ಎಂದು ಮತ್ತೊಮ್ಮೆ ಖುದ್ದಾಗಿ ಬಂದು ಪರಿಶೀಲಿಸುವುದಾಗಿ ತಿಳಿಸಿದರು.

ಹೊಸದಾಗಿ ನಿರ್ಮಿಸುತ್ತಿರುವ ಟರ್ಮಿನಲ್ ಗಳಲ್ಲಿ ಕನ್ನಡ ಹೆಸರಿಡಿ ತರ್ಜುಮೆ ಮಾಡಬೇಡಿ. ಕನ್ನಡ ಕಾಣಲಿ ಕೇಳಲಿ, ಆಗ ಪ್ರಯಾಣಿಕರೇ ಕನ್ನಡ ತಿಳಿಯಲು ಉತ್ಸುಕರಾಗುತ್ತಾರೆ. ಹೊಸ ಕಟ್ಟಡಗಳಲ್ಲಿ ಅಳವಡಿಸುತ್ತಿರುವ ಕನ್ನಡ ನಾಡು ನುಡಿ ಬಿಂಬಿಸುವ ಕಲಾ ಪ್ರಕಾರಗಳು, ವಿಗ್ರಹಗಳು, ಚಿತ್ರಕಲಾ ಮಾದರಿಗಳು, ಕಲಾ ಪ್ರಕಾರಗಳು ಮುಂತಾದವುಗಳನ್ನು ಮುಂಚಿತವಾಗಿ ಪರಿಶೀಲಿಸಿ ಕಡ್ಡಾಯವಾಗಿ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಮಾಡಿಕೊಡಿ. ಈಗಾಗಲೇ ಹೆಸರಾಂತ ಪರಿಣಿತರಿದ್ದಾರೆ. ಅವರ ಸಲಹೆ ಪಡೆಯಿರಿ. ಎಲ್ಲವೂ ಕನ್ನಡ ಕನ್ನಡಿಗ ಕರ್ನಾಟಕ ಐಕ್ಯಮಂತ್ರದನ್ವಯ ಸಾಗಲಿ. ಮೊದಲು ಕನ್ನಡ ನಂತರ ಬೇರೆಲ್ಲಾ ಎಂಬುದು ಕನ್ನಡಿಗರಾಗಿ ನಮಗಿರಲೇಬೇಕಾದ ಪ್ರಥಮ ಜವಾಬ್ದಾರಿ ಎಂದು ಹೇಳಿದ ಅವರು ಅಭಿಯಾನದ ಮನವಿಪತ್ರ ಸಲ್ಲಿಸಿದರು. ಇದನ್ನೂ ಓದಿ: ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ

ವಿಮಾನ ನಿಲ್ದಾಣದ ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ್ ಆನಂದ್ ರಾವ್, ಕಾರ್ಪೋರೇಟ್ ವ್ಯವಹಾರಗಳ ಮುಖ್ಯಸ್ಥ ಶ್ರೀನಿವಾಸ್ ವಿ.ಎಸ್.ಎಂ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ನಾಗರಾಜ್. ಜಿ, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಶ್ರೀಧರ್, ಸಿ ಎಸ್ ಆರ್ ವಿಭಾಗದ ಮುಖ್ಯಸ್ಥ ಹೇಮಚಂದ್ರ ಮಧುಸೂದನ, ಯೋಜನಾ ವಿಭಾಗದ ಉಪಾಧ್ಯಕ್ಷ ಸುಂದರ ಚಂದ್ರಮೌಳಿ, ಕಲಾವಿಭಾಗದ ನಿರ್ದೇಶಕ ಯಾಮಿನಿ ಡೆಲ್ಕನ್, ಉಡಾವಣಾ ಕೇಂದ್ರ ವಿಭಾಗದ ಉಪಾಧ್ಯಕ್ಷ ಪ್ರಸನ್ನಮೂರ್ತಿ ದೇಸಾಯಿ, ಕಾರ್ಪೋರೇಟ್ ವ್ಯವಹಾರಗಳ ಉಪ ವ್ಯವಸ್ಥಾಪಕ ಚಂದ್ರಶೇಖರ್ ಬಿರಾದರ್ ಸೇರಿದಂತೆ ಅನೇಕ ಅಧಿಕಾರಿ, ಸಿಬ್ಬಂದಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications