Connect with us

Bengaluru City

ಸುರೇಶ್ ಅಂಗಡಿ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರ ಸಂತಾಪ

Published

on

ಬೆಂಗಳೂರು: ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ರಾಜ್ಯ ರಾಜಕೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುರೇಶ್ ಅಂಗಡಿ ಅವರು ಒಬ್ಬ ಸಜ್ಜನ ರಾಜಕಾರಣಿ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದ ಜನಪ್ರಿಯ ನಾಯಕರಾಗಿದ್ದರು. 2019ರಲ್ಲಿ ಭಾರತದ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ರಾಜ್ಯಕ್ಕೆ ಅನೇಕ ರೈಲ್ವೆ ಯೋಜನೆಗಳನ್ನು ತರುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಸಿಎಂ ಬಿಎಸ್‍ವೈ ಸಂತಾಪ ಸೂಚಿಸಿದ್ದಾರೆ.

ಇತ್ತೀಚೆಗಷ್ಟೆ ಬೆಂಗಳೂರಿಗೆ ಆಗಮಿಸಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರದಲ್ಲಿ ಬಾಕಿ ಇದ್ದ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಿ ಅವುಗಳ ಅನುಷ್ಠಾನಕ್ಕೆ ವೇಗ ನೀಡಿದ್ದರು. ಅವರ ನಿಧನದಿಂದ ಒಬ್ಬ ಆತ್ಮೀಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಸುರೇಶ್ ಅಂಗಡಿಯವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ.

ಜೊತೆಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ಬೆಳಗಾವಿ ಸಂಸದರು, ಕೇಂದ್ರ ರೈಲ್ವೆ ರಾಜ್ಯ ಸಚಿವರೂ ಆದ ಸುರೇಶ್ ಅಂಗಡಿ ಅವರು ವಿಧಿವಶರಾದದ್ದು ತೀವ್ರ ದಿಗ್ಭ್ರಮೆಯನ್ನುಂಟು ಮಾಡಿದೆ. ಸತತ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಸುರೇಶ್ ಅಂಗಡಿ ಅವರು ಈ ಬಾರಿ ಕೇಂದ್ರದಲ್ಲಿ ರೈಲ್ವೆ ಖಾತೆ ರಾಜ್ಯಸಚಿವರಾಗಿ ರಾಜ್ಯದ ರೈಲ್ವೆ ಸಾರಿಗೆ ಅಭಿವೃದ್ಧಿಯ ಕನಸುಗಳನ್ನು ಹೊಂದಿದ್ದರು. ದುರಾದೃಷ್ಟ ಕೊರೊನಾ ಸೋಂಕಿನಿಂದ ನಮ್ಮನ್ನಗಲಿರುವುದು. ರಾಜ್ಯದ ಅಭಿವೃದ್ಧಿಯ ಮಾರ್ಗವೊಂದು ಕಡಿತಗೊಂಡಂತಾಗಿದೆ. ಸುರೇಶ್ ಅಂಗಡಿ ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕೇವಲ ಐದು ದಿನಗಳ ಹಿಂದೆ ಸಹಕಾರಿ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿಯವರನ್ನು ಕಳೆದುಕೊಂಡೆವು. ಇದೀಗ ಮತ್ತೊಂದು ಆಘಾತವುಂಟಾಗಿದೆ. ಸುರೇಶ್ ಅಂಗಡಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವಹೊಂದಿದ್ದರು. ಸಹೃದಯಿಯಾಗಿದ್ದರು. 4 ಬಾರಿ ಸಂಸದರಾಗಿ, ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವರು ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಪಕ್ಷದ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬ ಪರಿವಾರದವರಿಗೆ ಹಾಗೂ ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಿ, ಮೃತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಡಿಸಿಎಂ ಗೋವಿಂದ ಕಾರಜೋಳ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇವರ ಜೊತೆಗೆ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ್, ರೈಲ್ವೆ ಇಲಾಖೆಯ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿಯವರ ನಿಧನ ಕರ್ನಾಟಕದ ಅಭಿವೃದ್ಧಿಗೆ ತುಂಬಲಾರದ ನಷ್ಟ. ಅತ್ಯಂತ ಸಜ್ಜನ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ಉತ್ತರ ಕರ್ನಾಟಕದ ಕಟ್ಟಾಳುವಿನ ಅಕಾಲಿಕ ಅಗಲಿಕೆ ಅತೀವ ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *