Wednesday, 23rd October 2019

ಸುಧಾಕರ್ ಮೇಲೆ ಹಲ್ಲೆ- ಕೈ ಎಂಎಲ್‍ಸಿ ನಜೀರ್ ಆಹ್ಮದ್ ವಿರುದ್ಧ ಎಫ್‍ಐಆರ್

ಬೆಂಗಳೂರು: ಅನರ್ಹ ಶಾಸಕ ಸುಧಾಕರ್ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇಲೆ ಕಾಂಗ್ರೆಸ್ ಎಂಎಲ್‍ಸಿ ನಜೀರ್ ಆಹ್ಮದ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಸುಧಾಕರ್ ಅವರು ರಾಜೀನಾಮೆ ನೀಡಲು ಹೋದ ಸಮಯದಲ್ಲಿ ವಿಧಾನಸೌಧದಲ್ಲಿ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಜೀರ್ ಆಹ್ಮದ್ ಹಾಗೂ ಅವರ ಸಂಗಡಿಗರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.

ಸುಧಾಕರ್ ರಾಜೀನಾಮೆ ನೀಡಲು ಹೋದ ಸಮಯದಲ್ಲಿ ವಿಧಾನಸೌಧದಲ್ಲಿ ಗಲಾಟೆಯಾಗಿತ್ತು. ಈ ವೇಳೆ ಸುಧಾಕರ್ ಮೇಲೆ ಹಲ್ಲೆ ಆಗಿದೆ ಎಂದು ವಕೀಲ ಅಮೃತೇಶ್ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅಧಾರದ ಮೇಲೆ ಸುಧಾಕರ್ ಹೇಳಿಕೆ ಪಡೆದಿರುವ ಪೊಲೀಸರು ಆಹ್ಮದ್ ಹಾಗೂ ಅವರ ಸಂಗಡಿಗರ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದಾರೆ.

ಆಗಿದ್ದೇನು?:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಬಂದಿದ್ದ ಸುಧಾಕರ್ ಅವರನ್ನು ಕಾಂಗ್ರೆಸ್ ನಾಯಕರು ಜಾರ್ಜ್ ಕೊಠಡಿಯಲ್ಲಿ ಮನವೊಲಿಸಲು ಪ್ರಯತ್ನಿಸಿದ್ದರು. ಈ ವೇಳೆ ಸುಧಾಕರ್ ನನ್ನನ್ನು ಬಿಟ್ಟು ಬಿಡಿ ಪ್ಲೀಸ್, ನಾನು ರಾಜೀನಾಮೆ ವಾಪಸ್ ಪಡೆಯಲ್ಲ. ನನಗೆ ಸಾಕಾಗಿದೆ, ನಾನು ಎಲ್ಲವನ್ನೂ ಯೋಚಿಸಿಯೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ಕಾಂಗ್ರೆಸ್ ನಾಯಕರಲ್ಲಿ ಕೇಳಿಕೊಂಡಿದ್ದರು.

ಈ ವೇಳೆ ಕಾಂಗ್ರೆಸ್ ನಾಯಕರು, ಏಯ್ ಸುಧಾಕರ್, ಸ್ವಲ್ಪ ಹೇಳುವುದನ್ನು ಕೇಳಿಸಿಕೋ. ಮುಂದೆ ಎಲ್ಲವೂ ಕೂಡ ಒಳ್ಳೆಯದಾಗುತ್ತೆ. ಅಲ್ಲದೆ ನೀನು ಮಂತ್ರಿ ಕೂಡ ಆಗುತ್ತೀಯಾ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಸುಧಾಕರ್ ನಾಯಕರ ಮಾತನ್ನು ಒಪ್ಪಿರಲಿಲ್ಲ. ಅಲ್ಲದೇ ಮುಂಬೈಗೆ ತೆರಳಿ ಉಳಿದ ಶಾಸಕರೊಂದಿಗೆ ಸೇರಿಕೊಂಡಿದ್ದರು. ಆ ಬಳಿಕ ಅಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರೆಲ್ಲರನ್ನೂ ಅನರ್ಹಗೊಳಿಸಿದ್ದರು.

Leave a Reply

Your email address will not be published. Required fields are marked *