Tuesday, 16th July 2019

ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

ಬೆಂಗಳೂರು: ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರಿನ (ಐಐಐಟಿ-ಬಿ) 22 ವರ್ಷದ ವಿದ್ಯಾರ್ಥಿಯೊಬ್ಬರು ಗೂಗಲ್ ಸಂಸ್ಥೆಗೆ ಆಯ್ಕೆಯಾಗಿದ್ದು, ಸದ್ಯ ಅವರ ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ. ನಿಗದಿಯಾಗಿದೆ.

ನ್ಯೂಯಾರ್ಕ್ ನಲ್ಲಿರುವ ಗೂಗಲ್ ಸಂಸ್ಥೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ವಿಂಗ್‍ಗೆ ಐಐಐಟಿ-ಬಿ ವಿದ್ಯಾರ್ಥಿ ಆದಿತ್ಯ ಪಾಲಿವಾಲ್ ಅವರು ಆಯ್ಕೆಯಾಗಿದ್ದಾರೆ. ಆದಿತ್ಯ ಅವರು ಮುಂಬೈ ಮೂಲದವರು. ಬೆಂಗಳೂರಿನ ಐಐಐಟಿಯಲ್ಲಿ ಐದು ವರ್ಷ ಇಂಟಿಗ್ರೆಟೆಡ್ ವ್ಯಾಸಂಗ ಮಾಡಿ ಎಂ.ಟೆಕ್ ಪದವಿ ಪಡೆದಿದ್ದರು.

ಬೆಂಗಳೂರು ಬಗ್ಗೆ ಆದಿತ್ಯ ಹೇಳಿದ್ದೇನು?
ಬೆಂಗಳೂರಿನಲ್ಲಿ ಕಳೆದ ಐದು ವರ್ಷ ಅನುಭವ ಅದ್ಭುತವಾಗಿತ್ತು. ಕಾಲೇಜಿನ ಶಿಕ್ಷಕರು ಸೃಜನಾತ್ಮಕ ವಿಚಾರಗಳನ್ನು ಬೆಳೆಸುತ್ತಿದ್ದರು, ಅಷ್ಟೇ ಅಲ್ಲದೆ ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡುತ್ತಿದ್ದರು. ಹಿರಿಯ ವಿದ್ಯಾರ್ಥಿಗಳು ಗೂಗಲ್ ಸಂಸ್ಥೆಯ ಆಯ್ಕೆಗೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೆಮ್ಮೆಯಿಂದ ಆದಿತ್ಯ ಹೇಳಿದರು.

ಗೂಗಲ್ ಸಂಸ್ಥೆಯು ಕೋಡಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಜಗತ್ತಿನ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಕೇವಲ 50 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದು, ಆದಿತ್ಯ ಕೂಡಾ ಒಬ್ಬರಾಗಿದ್ದಾರೆ.

2017-18ರಲ್ಲಿ ಎಸಿಎಂನಿಂದ ನಡೆಯುವ ಕಾಲೇಜು ಮಟ್ಟದ ಅಂತರಾಷ್ಟ್ರೀಯ ಪ್ರೋಗ್ರಾಮಿಂಗ್ ಸ್ಪರ್ಧೆ (ಐಸಿಪಿಸಿ)ಯ ಅಂತಿಮ ಸ್ಪರ್ಧಿಗಳಲ್ಲಿ ಆದಿತ್ಯ ಕೂಡಾ ಒಬ್ಬರಾಗಿದ್ದರು. ಆದಿತ್ಯ ಅವರ ತಂಡದಲ್ಲಿ ಸಿಮ್ರಾನ್ ಡೊಜನಿಯಾ ಹಾಗೂ ಶ್ಯಾಮ್ ಕೆ.ಬಿ. ಕೂಡಾ ಇದ್ದರು. ಈ ಸ್ಪರ್ಧೆಯು ಕಂಪ್ಯೂಟರ್ ಭಾಷೆಯ ಕೋಡಿಂಗ್ ಉತ್ಸಾಹಿಗಳಿಗೆ ಆಯೋಜಿಸುವ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದಾಗಿದೆ. ಇದೇ ವರ್ಷ ಏಪ್ರಿಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ 3,098 ವಿಶ್ವವಿದ್ಯಾನಿಲಯಗಳ 50 ಸಾವಿರ ವಿದ್ಯಾರ್ಥಿಗಳು ಭಾಗವಹಸಿದ್ದರು.

Leave a Reply

Your email address will not be published. Required fields are marked *