Wednesday, 11th December 2019

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಗಾಂಧೀಜಿಗೆ ಅವಮಾನ – ಸಿದ್ದರಾಮಯ್ಯ

– ಮೋದಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಬಗ್ಗೆ ಗೊತ್ತೇ ಇಲ್ಲ

ಬೆಂಗಳೂರು: ಅಮೆರಿಕಾದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ನಡೆದ ಜವಾಹರಲಾಲ್ ನೆಹರು ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಇಡೀ ಬದುಕನ್ನೇ ದೇಶಕ್ಕೆ ಅರ್ಪಿಸಿದ್ದಾರೆ. ದೇಶ ಕಟ್ಟಲು ದೇಹವನ್ನೇ ಸವೆಸಿದ ವ್ಯಕ್ತಿಯನ್ನು ಕೆಟ್ಟದಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಒಬ್ಬರೆ ರಾಷ್ಟ್ರಪಿತ ಇರೋದು ಅದು ಗಾಂಧಿ ಮಾತ್ರ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಟ್ರಂಪ್ ಮೋದಿ ಅವರನ್ನು ಫಾದರ್ ಆಫ್ ದಿ ನೇಷನ್ ಅಂತಾರೆ. ಟ್ರಂಪ್‍ಗೆ ಜ್ಞಾನದ ಕೊರತೆ ಇತ್ತು. ಆದರೆ ಮೋದಿ ನಾನಲ್ಲ ರಾಷ್ಟ್ರಪಿತ ಗಾಂಧೀಜಿ ಎಂದು ಹೇಳಬಹುದಿತ್ತು. ಆದರೆ ಪ್ರಧಾನಿ ಮೋದಿ ಆ ರೀತಿ ಹೇಳಿಲ್ಲ. ಮೋದಿ ಸ್ವಾತಂತ್ರ ಬಂದ ಬಳಿಕ ಹುಟ್ಟಿದವರು. ಅವರಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಬಗ್ಗೆ ಗೊತ್ತೇ ಇಲ್ಲ. ಆದರೆ ರಾಷ್ಟ್ರ ಭಕ್ತ, ರಾಷ್ಟ್ರ ಹರಿಕಾರ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಅವರೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಾರೆ ಎಂದು ಮೋದಿ ಮೇಲೆ ಕಿಡಿಕಾರಿದರು.

ಮೋದಿಯ ಆರ್ಥಿಕ ಆಡಳಿತ ಹೇಗಿದೆ ಎಂದರೆ ಜಿಡಿಪಿ ಶೇ.4.2 ಗೆ ಕುಸಿಯುತ್ತೆ ಅಂತ ವರದಿ ಬಂದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಯುವಕ ಯುವತಿಯರೆಲ್ಲಾ ನಮ್ಮನ್ನು ನೋಡಿ ಮೋದಿ ಮೋದಿ ಅಂತಾರೆ. ಪಾಪ ಈಗ ಅವರೆಲ್ಲರೂ ಕೆಲಸ ಕೇಳಿದರೆ ಪಕೋಡ ಮಾರಿ ಎನ್ನುತ್ತಾರೆ. ಈ ಮಟ್ಟಿಗೆ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋಗ್ತಿದೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಕೈಗೊಂಬೆ ಮಾಡ್ಕೊಂಡಿದ್ದಾರೆ. ಇಡಿ ಐಟಿ, ಸಿಬಿಐ ಎಲ್ಲಾ ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ಇದೇ ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಹೆಸರು ಬದಲಾವಣೆಯಿಂದ ಏನೂ ಆಗುವುದಿಲ್ಲ. ಮೊದಲು ಅನುದಾನ ಬಿಡುಗಡೆ ಮಾಡಲಿ. ನಂತರ ಕ್ವಾಲಿಟಿ ಕೊಡಲಿ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಉಪಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಈ ವೇಳೆ ತಿಳಿಸಿದರು.

Leave a Reply

Your email address will not be published. Required fields are marked *