Connect with us

Bengaluru City

ರಾಮಮಂದಿರ ನಿರ್ಮಾಣಕ್ಕೆ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡ್ತಿದ್ರೆ ದೂರು ಕೊಡಿ: ರೇಣುಕಾಚಾರ್ಯ

Published

on

ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕೆ ಯಾರೂ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡುತ್ತಿಲ್ಲ. ಒಂದು ವೇಳೆ ಯಾರಾದರೂ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡ್ತಿದ್ರೆ ಅಥವಾ ಅನುಮಾನ ಬಂದಿದ್ದರೆ ಅವರ ಮೇಲೆ ದೂರು ಕೊಡಿ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಕುಮಾರಸ್ವಾಮಿಯವರೇ ನೀವ್ಯಾಕೆ ಸಂಘ ಪರಿವಾರದ ಕಾರ್ಯಕರ್ತರನ್ನು ಹಿಟ್ಲರ್ ಗೆ ಹೋಲಿಸ್ತೀರಿ?, ಯಾರೂ ಬಲವಂತವಾಗಿ ದೇಣಿಗೆ ಸಂಗ್ರಹಿಸ್ತಿಲ್ಲ. ಬಲವಂತವಾಗಿ ದೇಣಿಗೆ ಸಂಗ್ರಹ ಮಾಡ್ತಿದ್ರೆ ದೂರು ಕೊಡಿ ಎಂದು ತಿಳಿಸಿದ್ದಾರೆ.

ಮನೆಗಳಿಗೆ ಮಾರ್ಕ್ ಮಾಡ್ತಿದ್ರೆ ಎಲ್ಲಿ ಅಂತ ತೋರಿಸಿ. ದಾಖಲೆ ಕೊಡಿ, ವಿಷಯಾಂತರ ಮಾಡಬೇಡಿ. ರಾಮಮಂದಿರ ಬಹಳ ವರ್ಷಗಳ ಕನಸು. ಬಿಜೆಪಿ ಯಾವತ್ತೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ. ವಿನಾಕಾರಣ ಆರೋಪ ಮಾಡೋದು ಸರಿಯಲ್ಲ. ರಾಮಮಂದಿರ ದೇಣಿಗೆಯಲ್ಲಿ ಒಂದು ರೂ. ಸಹ ವ್ಯತ್ಯಾಸ ಆಗಲ್ಲ. ನೀವೂ ದೇವಭಕ್ತರು. ನೀವೂ ರಾಮಮಂದಿರಕ್ಕೆ ದೇಣಿಗೆ ಉದಾರವಾಗಿ ಕೊಡಿ. ದೇಣಿಗೆ ಕೊಟ್ಟು ರಾಮನ ಕೃಪೆಗೆ ಒಳಗಾಗಿ. ಆದರೆ ಇಂತಹ ಹೇಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಣಿಗೆಗೆ ಧಮ್ಕಿ ಹಾಕಿದ್ರೆ, ಬಲವಂತ ಮಾಡಿದ್ರೆ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಆದರೆ ಜನ ಉದಾರವಾಗಿ ದೇಣಿಗೆ ಕೊಡ್ತಿದ್ದಾರೆ. ವಿನಾಕಾರಣ ವಿವಾದ ಸೃಷ್ಟಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ದೇಶ, ರಾಜ್ಯದಲ್ಲಿ ಸೋತು ಸುಣ್ಣವಾಗಿದೆ. ಕಾಂಗ್ರೆಸ್ ಅಹಿಂದ ಪರ ಇಲ್ಲ. ಬಿಜೆಪಿ ಅಹಿಂದ ವರ್ಗಕ್ಕೆ ಹಲವು ಉತ್ತಮ ಕೆಲಸ ಮಾಡಿಕೊಟ್ಟಿದೆ. ಬಿಜೆಪಿ ಮುಂದೆ ಕಾಂಗ್ರೆಸ್ ನ ಹಿಂದ ಅಹಿಂದ ಸಮಾವೇಶಗಳು ವರ್ಕೌಟ್ ಆಗಲ್ಲ. ಕಾಂಗ್ರೆಸ್ ಅಧಿಕಾರದಲ್ಲಿಲ್ಲ, ಅಧಿಕಾರಕ್ಕೆ ಬರೋದೂ ಇಲ್ಲ. ಅವರು ಅಹಿಂದ ಸಮಾವೇಶಕ್ಕೆ ಏನೂ ಪ್ರಯೋಜನ ಮಾಡ್ತಾರೆ ಹೇಳಿ ಎಂದು ಪ್ರಶ್ನಿಸಿದರು.

ಅರುಣ್ ಸಿಂಗ್ ರಾಜ್ಯಕ್ಕೆ ಆಗಮನ ವಿಚಾರದ ಕುರಿತು ಮಾತನಾಡಿ, ನಮ್ಮ ರಾಜ್ಯದ ಉಸ್ತುವಾರಿಗಳು ಬಂದಾಗ ನಾವು ಭೇಟಿ ಮಾಡೋದು ಸಂಪ್ರದಾಯ. ಪ್ರಸ್ತುತ ವಿಚಾರಗಳ ಬಗ್ಗೆ ಅರುಣ್ ಸಿಂಗ್ ಜೊತೆ ಚರ್ಚೆ ಮಾಡ್ತೇವೆ. ಸಚಿವನಾಗಿಲ್ಲ ಅಂತ ಹಾದಿಬೀದಿಯಲ್ಲಿ ನಾನು ಮಾತಾಡಲ್ಲ. ಪಕ್ಷದ ವೇದಿಕೆಯಲ್ಲಿ ಅದರ ಬಗ್ಗೆ ಮಾತಾಡ್ತೇನೆ ಎಂದರು.

ಯತ್ನಾಳ್ ವಿಚಾರದಲ್ಲಿ ಪಕ್ಷ ತೀರ್ಮಾನ ಕೈಗೊಂಡಿದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಯತ್ನಾಳ್ ನೊಟೀಸ್ ಸಿಕ್ಕಿಲ್ಲ ಅಂತ ಹೇಳ್ತಿರೋ ವಿಚಾರ ನನಗೆ ಮಾಹಿತಿ ಇಲ್ಲ. ಎಲ್ಲವನ್ನೂ ಪಕ್ಷ ನಿರ್ಧರಿಸುತ್ತದೆ. ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷ ಎಲ್ಲವನ್ನೂ ಗಮನಿಸ್ತಿದೆ. ಪಕ್ಷದ ಎಲ್ಲದರ ನಿರ್ಧಾರ ಮಾಡುತ್ತೆ ಎಂದು ಹೇಳಿದರು.

ನಮ್ಮ ಸರ್ಕಾರ ಸರ್ಕಾರ ಧರ್ಮದ ತಳಹದಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಮೀಸಲಾತಿ ಬೇಕು ಅಂತ ಕನಕ ಪೀಠದ ಶ್ರೀಗಳು ಧರಣಿ ಮಾಡಿದ್ರು. ಅದಕ್ಕೆ ನಾನೂ ಬೆಂಬಲ ಕೊಟ್ಟೆ. ಪಂಚಮಸಾಲಿ ಲಿಂಗಾಯತ ಸಮಾಜದ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಂಡು ಬೆಂಬಲಿಸಿದ್ದೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಹಲವು ಒಳಪಂಗಡಗಳಿಗೆ ಮೀಸಲಾತಿ ಬೇಕಿದೆ. ಪಂಚಮಸಾಲಿಯವ್ರಿಗೂ ಮೀಸಲಾತಿ ಕೊಡಲ ನಮ್ಮ ವಿರೋಧ ಇಲ್ಲ. ಹಾಗೆಯೇ ಸಮಾಜದ ಒಳಂಗಡಗಳಿಗೂ ಮೀಸಲಾತಿ ಕೊಡಲಿ ಎಂದು ಮೀಸಲಾತಿ ಹೋರಾಟಗಳ ವಿಚಾರ ಸಂಬಂಧ ಪ್ರತಿಕ್ರಿಯಿಸಿದರು.

Click to comment

Leave a Reply

Your email address will not be published. Required fields are marked *