Connect with us

Bengaluru City

ನನ್ನ ಡಿಎನ್‍ಎಯಲ್ಲೂ ಕನ್ನಡವಿದೆ- ಟೀಕಾಕಾರರಿಗೆ ಪ್ರಶಾಂತ್ ನೀಲ್ ಉತ್ತರ

Published

on

ಬೆಂಗಳೂರು: ನಾನು ಮುಂದೆ ಮಾಡುವ ಎಲ್ಲ ಸಿನಿಮಾಗಳು ಕನ್ನಡ ಚಿತ್ರಗಳೇ ಆಗಿರಲಿವೆ ಎಂದು ಕನ್ನಡ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಪ್ರಶಾಂತ್ ನೀಲ್ ಅವರು, ತೆಲುಗಿನ ಖ್ಯಾತ ನಟ ಜೂನಿಯರ್ ಎನ್‍ಟಿಆರ್ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದರು. ಇದಾದ ಬಳಿಕ ಕೆಜಿಎಫ್-2 ಸಿನಿಮಾದ ಬಳಿಕ ನೀಲ್ ಎನ್‍ಟಿಆರ್ ಜೊತೆಗೆ ತೆಲುಗು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಈ ಸುದ್ದಿಯಾದ ನಂತರ ಪ್ರಶಾಂತ್ ನೀಲ್ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಜೊತೆಗೆ ಇಲ್ಲಿ ಹುಟ್ಟಿ ಇಲ್ಲಿ ಬೆಳೆದು ನಂತರ ಬೇರೆ ಭಾಷೆಯ ಸಿನಿಮಾ ಮಾಡಲು ಹೋಗಬಾರದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಉಗ್ರಂ ಮತ್ತು ಕೆಜಿಎಫ್ ಚಿತ್ರಗಳು ಹಿಟ್ ಆಗಿದ್ದು, ನಮ್ಮ ಕರ್ನಾಟಕದಲ್ಲಿ ಇನ್ನು ಮುಂದೆ ಪ್ರಶಾಂತ್ ನೀಲ್ ಅವರು ಕನ್ನಡ ಸಿನಿಮಾವನ್ನೇ ನಿರ್ದೇಶನ ಮಾಡಬೇಕು ಎಂದು ಕನ್ನಡ ಚಿತ್ರರಸಿಕರು ಆಗ್ರಹಿಸಿದ್ದರು.

ಈ ವಿಚಾರ ಎಲ್ಲ ಕಡೆ ಜೋರಾಗಿ ಸುದ್ದಿಯಾಗುತ್ತಿದ್ದಂತೆ ಸ್ವತಃ ಪ್ರಶಾಂತ್ ನೀಲ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ನನಗೆ ಕೆಲಸ ಮತ್ತು ಅನ್ನ ನೀಡಿರುವುದು ಕನ್ನಡಿಗರು. ಹಾಗಾಗಿ ನನ್ನ ಡಿಎನ್‍ಎಯಲ್ಲೂ ಕನ್ನಡವಿದೆ. ಈಗ ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ನಿರತನಾಗಿದ್ದೇನೆ. ನಾನು ಮುಂದೆ ಮಾಡುವ ಎಲ್ಲಾ ಸಿನಿಮಾಗಳು ಕನ್ನಡ ಚಿತ್ರಗಳೇ ಆಗಿರಲಿವೆ ಎಂದು ಹೇಳುವ ಮೂಲಕ ಎನ್‍ಟಿಆರ್ ಜೊತೆ ಸಿನಿಮಾ ಎಂಬ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.

ಎನ್‍ಟಿಆರ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿದ್ದ ನೀಲ್, ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದಲ್ಲಿ ಕುಳಿತರೆ ಹೇಗಿರುತ್ತದೆ ಎಂಬುದನ್ನು ನಾನು ಅಂತಿಮವಾಗಿ ತಿಳಿದೆ. ಮುಂದಿನ ಸಲ ಕ್ರೇಜಿ ಎನರ್ಜಿಗೆ ನನ್ನ ರೇಡಿಯೇಶನ್ ಸೂಟ್ ತರುತ್ತೇನೆ. ಅಲ್ಲದೆ ಹ್ಯಾಪಿ ಬರ್ತ್‍ಡೇ ಬ್ರದರ್ ಹ್ಯಾವ್ ಎ ಸೇಫ್ ಆ್ಯಂಡ್ ಗ್ರೇಟ್ ಡೇ, ಸೀ ಯು ಸೂನ್ ಎಂದು ಬರೆದು. ಹ್ಯಾಶ್ ಟ್ಯಾಗ್‍ನೊಂದಿಗೆ ಹ್ಯಾಪಿ ಬರ್ತ್ ಡೇ ಎನ್‍ಟಿಆರ್, ಸ್ಟೇ ಹೋಮ್ ಸ್ಟೇ ಸೇಫ್ ಎಂದು ಬರೆದುಕೊಂಡಿದ್ದರು.

ಸದ್ಯ ಕೆಜಿಎಫ್-2 ಚಿತ್ರೀರಣದಲ್ಲಿ ಬ್ಯುಸಿ ಇರುವ ನೀಲ್, ಲಾಕ್‍ಡೌನ್ ನಂತರ ಮತ್ತೆ ಚಿತ್ರದ ಚಟುವಟಿಕೆಗಳನ್ನು ಆರಂಭ ಮಾಡಿದ್ದಾರೆ. ಚಿತ್ರವನ್ನು ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿಕೊಂಡಿದೆ. ಈಗಾಗಲೇ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಟ್ರೈಲರ್ ಬಿಡುಗಡೆಗೆ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇಡೀ ಭಾರತ ಚಿತ್ರರಂಗವೇ ರಾಕಿಭಾಯ್ ಬರುವಿಕೆಗಾಗಿ ಕಾದು ಕುಳಿತಿದೆ.