Connect with us

Bengaluru Rural

ಭೈರವದುರ್ಗ ಬೆಟ್ಟದ ಮೇಲೆ 65 ಅಡಿ ಉದ್ದದ ಬಾವುಟ ಹಾರಿಸಿ ಕನ್ನಡ ರಾಜ್ಯೋತ್ಸವ

Published

on

ಬೆಂಗಳೂರು: ನಾಳೆ ರಾಜ್ಯದಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ, ಆದರೆ ನಾಡ ಹಬ್ಬದ ಮುನ್ನ ದಿನವೇ ಯುವಕರ ತಂಡವೊಂದು ಇತಿಹಾಸ ಪ್ರಸಿದ್ಧ ಬೆಟ್ಟದ ತುತ್ತತುದಿಯಲ್ಲಿ ರಾಜ್ಯೋತ್ಸವವನ್ನು ಸ್ಮರಣೀಯವಾಗಿ ಆಚರಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಮಾಗಡಿ ಕೆಂಪೇಗೌಡರು ಆಳಿದ ಭೈರವದುರ್ಗ ಬೆಟ್ಟದ ಮೇಲೆ ಯುವಕರ ತಂಡವೊಂದು 65 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುದೂರು ಹೋಬಳಿಯ ಭೈರವೇಶ್ವರ ನಗರದ ಯುವಕರು, ಪ್ರತಿವರ್ಷವು ಬೃಹತ್ ಆದ ಬಾವುಟವನ್ನು ಹಿಡಿದು ಎತ್ತರದ ಬೆಟ್ಟ ಹತ್ತಿ, ಯಶಸ್ವಿಯಾಗಿ ಹಾರಿಸಿ ಕನ್ನಡ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ.

ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಹೆಸರಲ್ಲಿ ನವೆಂಬರ್ 1ಕ್ಕಿಂತ ಮುಂಚಿತವಾಗಿಯೇ, ಅಕ್ಟೋಬರ್ 31ರಂದೇ ಬಾವುಟ ಹಾರಿಸಿದ್ದಾರೆ. ಭೈರವೇಶ್ವರನಗರದ ಯುವಕರೆಲ್ಲ ಸೇರಿ, ಕನ್ನಡ ಗೀತೆ ಹಾಡಿ ಬೆಟ್ಟ ಏರಿ ಸತತ 14 ವರ್ಷಗಳಿಂದ ಬಾವುಟವನ್ನು ಹಾರಿಸುತ್ತಿದ್ದಾರೆ. ಈ ಬೆಟ್ಟ ನಾಡಪ್ರಭು ರಾಜಧಾನಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ತಮ್ಮ ಸೇನೆಯಲ್ಲಿದ್ದ ಕುದುರೆಗಳನ್ನು ಇದೇ ಬೆಟ್ಟದಲ್ಲಿ ಪೋಷಣೆ ಮಾಡುತ್ತಿದ್ದರು ಎಂಬ ಪುರಾವೆಗಳಿರುವ ಪ್ರಸಿದ್ಧ ತಾಣವಾಗಿದೆ.

ಸಾವನದುರ್ಗ, ಹುಲಿಯೂರು ದುರ್ಗ, ದೇವರಾಯನದುರ್ಗ ಸೇರಿದಂತೆ ಪ್ರಮುಖ ಏಳು ದುರ್ಗಗಳಲ್ಲಿ ಈ ಕುದೂರಿನ ಭೈರವದುರ್ಗ ಕೂಡ ಒಂದಾಗಿದೆ. ಹೀಗಾಗಿ ಯುವಕರ ತಂಡ ಕನ್ನಡಾಂಬೆಯ ಹಬ್ಬವನ್ನು ವಿಶೇಷವಾಗಿ ಇಲ್ಲಿ ಆಚರಿಸಿದ್ದಾರೆ. ಈ ತಂಡಕ್ಕೆ ಗ್ರಾಮಸ್ಥರು ಸಹ ಸಾಥ್ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in