Connect with us

Bengaluru City

ಮನೆ ಮುಂದೆ ರಸ್ತೆ ಬದಿ ಕಾರು ನಿಲ್ಲಿಸಿದ್ರೆ ಪಾವತಿಸಿ 5 ಸಾವಿರ ರೂ.

Published

on

– ಬೆಂಗಳೂರಿನಲ್ಲಿ ಜಾರಿಯಾಗಲಿದೆ ಹೊಸ ಪಾರ್ಕಿಂಗ್‌ ನೀತಿ
– ಪ್ರಮುಖ ರಸ್ತೆಯಲ್ಲಿ ಹೆಚ್ಚು ಸಮಯ ನಿಲ್ಲಿಸಿದ್ದರೂ ಶುಲ್ಕ

ಬೆಂಗಳೂರು: ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆಯ ಪಕ್ಕ ರಸ್ತೆ ಬದಿ ವಾಹನಗಳನ್ನು ಪಾರ್ಕ್‌ ಮಾಡಿದರೆ ಶುಲ್ಕ ಕಟ್ಟಬೇಕು. ಪಾರ್ಕಿಂಗ್‌ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಪಾವತಿಗೆ ಸಿದ್ದರಾಗಿರಬೇಕು.

ಹೌದು. ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಕೇಂದ್ರ ನಗರ ಸಾರಿಗೆ ಸಹಕಾರದೊಂದಿಗೆ ಪಾರ್ಕಿಂಗ್ ಶುಲ್ಕ ನಿಗದಿಯಾಗಿದ್ದು, ಆರು ತಿಂಗಳ ಒಳಗಡೆ ಹೊಸ ಪಾರ್ಕಿಂಗ್ ನೀತಿ ಜಾರಿಯಾಗುವ ಸಾಧ್ಯತೆಯಿದೆ.

ನಮ್ಮ ಮೆಟ್ರೋ, ಓಲಾ ಸೇರಿದಂತೆ ಹಲವು ಸೇವೆಗಳಿಂದ ಹೊಸ ಪಾರ್ಕಿಂಗ್ ನೀತಿಗೆ ತಡೆ ಬಿದ್ದಿತ್ತು. ಆದರೆ ಸಾರ್ವಜನಿಕ ಸಾರಿಗೆ ಸಂಪರ್ಕ ಸುಧಾರಣೆ ನಡುವೆಯೂ ಪಾರ್ಕಿಂಗ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊಸ ಪಾರ್ಕಿಂಗ್ ನೀತಿ 2.0 ಗೆ ಕೇಂದ್ರ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ರೂಪಿಸಿದ್ದ ಪಾರ್ಕಿಂಗ್‌ ನೀತಿಗೆ ನಗರಾಭಿವೃದ್ಧಿ ಇಲಾಖೆ ಅಸ್ತು ಎಂದಿದೆ. ಕೇಂದ್ರ ನಗರ ಭೂ ಸಾರಿಗೆ ಆದೇಶವನ್ನು ಜಾರಿಗೆ ತರುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಈಗ ಬಿಬಿಎಂಪಿಗೆ ಸೂಚನೆ ನೀಡಿದೆ.

ಶುಲ್ಕ ಎಷ್ಟು?
ಪಾರ್ಕಿಂಗ್ ಶುಲ್ಕ ಯೋಜನೆ ಜಾರಿಗೆ ಬಂದಲ್ಲಿ ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳು ಶುಲ್ಕ ಕಟ್ಟಬೇಕಾಗುತ್ತದೆ. ಸಣ್ಣ ಕಾರುಗಳಿಗೆ ವಾರ್ಷಿಕ 1 ಸಾವಿರ ರೂ., ಮಧ್ಯಮ ಕಾರುಗಳಿಗೆ 3 ಸಾವಿರ/ 4ಸಾವಿರ, ದೊಡ್ಡ ಕಾರುಗಳಿಗೆ ವಾರ್ಷಿಕ 5 ಸಾವಿರ ರೂಪಾಯಿ ವರೆಗೂ ಶುಲ್ಕ ವಿಧಿಸಲು ಚಿಂತನೆ ನಡೆದಿದೆ. ಮೊದಲಿಗೆ ನಗರದ ಎರಡು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ಸಿಗಲಿದ್ದು, ಬಳಿಕ ಹಂತ ಹಂತವಾಗಿ ನಗರದ ಇತರ ಪ್ರದೇಶಗಳಲ್ಲಿ ಜಾರಿಯಾಗಲಿದೆ.

ಜನ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ವಾಕಿಂಗ್, ಸೈಕಲ್ ಓಡಿಸುವ ಹವ್ಯಾಸ ರೂಪಿಸಲು ಈ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಯಾಗಬೇಕು. ರೆಸಿಡೆನ್ಸಿ ಏರಿಯಾದ ರಸ್ತೆಗಳಲ್ಲಿ ಗಂಟೆ ಗೊಮ್ಮೆ ಪಾರ್ಕಿಂಗ್ ಶುಲ್ಕ ಹೆಚ್ಚಳವಾಗಬೇಕು. ಕನಿಷ್ಟ ದರ ಬಿಎಂಟಿಸಿ ಬಸ್ ನ 11 ಕಿ.ಮೀ ವ್ಯಾಪ್ತಿಗೆ ಎಷ್ಟಿರುತ್ತೋ ಅಷ್ಟು ಕಟ್ಟಬೇಕು ಎಂಬ ಪ್ರಸ್ತಾಪ ನೀತಿಯಲ್ಲಿದೆ.

2012 ರಲ್ಲಿ ಬೆಂಗಳೂರು ಪಾರ್ಕಿಂಗ್ 2.0 ಯೋಜನೆ ಜಾರಿಗೆ ತರಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಾರ್ವಜನಿಕ ಸಾರಿಗೆಗಳಲ್ಲಿ ಸುಧಾರಣೆ ಕಂಡ ಹಿನ್ನೆಲೆಯಲ್ಲಿ ಪಾರ್ಕಿಂಗ್ ನೀತಿ 2.0 ಪಾರ್ಕಿಂಗ್ ನೀತಿಗೆ ತಡೆ ಬಿದ್ದಿತ್ತು. ರಾಜ್ಯ ನಗರ ಅಭಿವೃದ್ಧಿ ಇಲಾಖೆಯ ಆದೇಶದಲ್ಲಿ 2020ರ ಮೇ ವೇಳೆಗೆ ಬೆಂಗಳೂರಿನಲ್ಲಿ ಒಟ್ಟು 94 ಲಕ್ಷ ವಾಹನಗಳಿವೆ. ಪ್ರತಿವರ್ಷ ಶೇ.10 ರಷ್ಟು ಪ್ರಮಾಣದಲ್ಲಿ ಹೊಸ ವಾಹನಗಳು ಬೆಂಗಳೂರು ರಸ್ತೆಗೆ ಇಳಿಯುತ್ತಿದೆ.

ನೀತಿಯಲ್ಲಿ ಏನಿದೆ?
ವಾಹನ ಮಾಲೀಕರು ತಮ್ಮ ಮನೆಯ ಸಮೀಪದ ರಸ್ತೆಗಳಲ್ಲಿ ಪಾವತಿ ಆಧಾರದಲ್ಲಿ ವಾಹನಗಳ ನಿಲುಗಡೆ ಮಾಡಲು ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಇದರ ಜೊತೆ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚು ಸಮಯ ನಿಲುಗಡೆ ಮಾಡಿದರೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಶಾಲೆಗಳು ವಾಹನ ನಿಲುಗಡೆಗೆ ಸ್ವಂತ ಸ್ಥಳಾವಕಾಶ ಹೊಂದುವುದನ್ನು ಕಡ್ಡಾಯಗೊಳಿಸುವ ಅಂಶಗಳು ಹೊಸ ಪಾರ್ಕಿಂಗ್‌ ನೀತಿಯಲ್ಲಿವೆ.

ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳ ನಿರ್ಮಾಣ, ವಲಯವಾರು ಪಾರ್ಕಿಂಗ್‌ ಕಾರ್ಯತಂತ್ರ ರೂಪಿಸುವುದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ನಿಗದಿ, ಟ್ರಕ್‌ಗಳಿಗೆ ವರ್ತುಲ ರಸ್ತೆಗಳ ಸಮೀಪದಲ್ಲೇ ಟರ್ಮಿನಲ್‌ ನಿರ್ಮಾಣ, ಪಾರ್ಕಿಂಗ್‌ ನಿರ್ವಹಣೆಗೆ ಹೊಸ ತಂತ್ರಜ್ಞಾನಗಳ ಅಳವಡಿಸಬೇಕು ಎಂಬ ಅಂಶಗಳಿವೆ.

Click to comment

Leave a Reply

Your email address will not be published. Required fields are marked *