Bengaluru City

ಐವರ ಮುಡಿಗೇರಿದ ಮಿಸೆಸ್ ಸೌತ್ ಇಂಡಿಯಾ 2021 ಕಿರೀಟ

Published

on

Share this

ಬೆಂಗಳೂರು: ಶಿಲ್ಪಾ ಸುಧಾಕರ್, ರಶ್ಮಿ ರಂಗಪ್ಪ, ನಿರ್ಮಲಾ, ಸುಪ್ರೀತಾ ಹಾಗೂ ಸಿಂಧು ಅವರು ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‍ಫುಲ್ ಸ್ಪರ್ಧೆಯ ವಿಜೇತರಾಗಿದ್ದಾರೆ.

ಹೋಟೆಲ್ ಶೆರಟನ್ ಗ್ರ್ಯಾಂಡ್‍ನಲ್ಲಿ ನಡೆದ ಮಿಸ್ ಹಾಗೂ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‍ಫುಲ್ ಫ್ಯಾಷನ್ ಶೋ ಶುಕ್ರವಾರದ ಸಂಜೆಗೆ ಸಾಕ್ಷಿಯಾಯಿತು. ಗೌನ್ ಹಾಗೂ ಸೀರೆಯಲ್ಲಿ ಮಿಂಚಿದ ಮಿಸೆಸ್ ಹಾಗೂ ಮಿಸ್ ವಿಭಾಗದ ರೂಪದರ್ಶಿಯರಿಗೆ ಕಡಿಮೆ ಇಲ್ಲದಂತೆ ಮಿಸ್ಟರ್ ವಿಭಾಗದವರೂ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಮಿಸೆಸ್ ಸೌತ್ ಇಂಡಿಯಾ ಕರ್ವಿ ವಿಭಾಗದಲ್ಲಿ ಹೇಮಾ, ಕಾವ್ಯ, ಸ್ನೇಹಾ ಕಿರೀಟ ಗೆದ್ದರು. ಮಿಸ್ಟರ್ ವಿಭಾಗದಲ್ಲಿ ಪವನ್, ಯೋಗೇಶ್, ರೇಹಂತ್ ಮೊದಲಿಗರಾದರು. ಮಿಸ್ ವಿಭಾಗದ ಕಿರೀಟ ಕೃಪಾ, ಸೋನಾಲಿ, ಗುಂಜನ್‍ಗೆ ಸಿಕ್ಕಿದೆ.

70 ರೂಪದರ್ಶಿಯರ ಮೋಹಕ ರ್‍ಯಾಂಪ್ ವಾಕ್‌: ಬೇರೆ ಬೇರೆ ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ದಕ್ಷಿಣ ಭಾರತದ 70 ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು. ಸೌಂದರ್ಯ ಸ್ಪರ್ಧೆ ಎಂದರೆ ತೆಳ್ಳಗೆ, ಬೆಳ್ಳಗೆ ಇರುವವರಿಗೆ ಮಾತ್ರ ಎನ್ನುವ ಮೂಢನಂಬಿಕೆಯನ್ನು ಕೈಬಿಡುವ ಉದ್ದೇಶದಿಂದ ಮಿಸೆಸ್ ಕರ್ವಿ ವಿಭಾಗವನ್ನು ಕೂಡ ಆಯೋಜಿಸಲಾಗಿತ್ತು. ಮಿಸೆಸ್ ಸೌತ್ ಇಂಡಿಯಾ ವಿಭಾಗದಲ್ಲಿ 30, ಮಿಸ್ ವಿಭಾಗದಲ್ಲಿ 20, ಮಿಸ್ಟರ್ ವಿಭಾಗದಲ್ಲಿ 20 ಸ್ಪರ್ಧಿಗಳು ಭಾಗವಹಿಸಿದರು. ಮಿಸೆಸ್ ವಿಭಾಗದಲ್ಲಿ ಐವರನ್ನು ವಿಜೇತರನ್ನಾಗಿ ಘೋಷಿಸಲಾಯಿತು. ಮಿಸ್‍ನಲ್ಲಿ ಮೂವರು ಹಾಗೂ ಮಿಸ್ಟರ್ ವಿಭಾಗದಲ್ಲೂ ಮೂವರು ಗೆಲುವಿನ ಸಂಭ್ರಮ ಆಚರಿಸಿದರು. ಇದನ್ನೂ ಓದಿ: ನಾನ್ಸೆನ್ಸ್ ಆರೋಪಕ್ಕೆ ತಲೆಕೆಡಿಸಿಕೊಳ್ಳಬೇಡಿ- ಕೋಟಾಗೆ ರಘುಪತಿ ಭಟ್ ಬೆಂಬಲ

ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್ ಮಾತನಾಡಿ, ಫ್ಯಾಷನ್ ಶೋ ಎಂದರೆ ಕೇವಲ ಸೌಂದರ್ಯದ ಅನಾವರಣ ಅಲ್ಲ. ಕೊರೊನಾ ಸಂದರ್ಭದಲ್ಲೂ ಕೆಲವರ ಮುಖದಲ್ಲಿ ಸಂತೋಷ ಕಾಣುವಂತೆ ಮಾಡುವುದು ಇದರ ಉದ್ದೇಶ. ಮದುವೆಯಾದ ನಂತರ ಕೂಡ ತಮಗೆ ರ್ಯಾಂಪ್ ಮೇಲೆ ಹೆಜ್ಜೆಹಾಕುವ ಅವಕಾಶ ಸಿಕ್ಕಿದ್ದಕ್ಕೆ ಮಿಸೆಸ್ ವಿಭಾಗದ ಸ್ಪರ್ಧಿಗಳು ಸಂಭ್ರಮಿಸುತ್ತಾರೆ. ನಾನು ಅವರಿಗೆಲ್ಲಾ ಅಭಿನಂದನೆ ಹೇಳಲೇಬೇಕು ಎಂದರು.

ಕಾರ್ಯಕ್ರಮದ ಅತಿಥಿ ಹಾಗೂ ನಟ ಜೆ.ಕೆ ಮಾತನಾಡಿ, ಇಲ್ಲಿ ಹೆಜ್ಜೆ ಹಾಕಿದ ಎಲ್ಲರ ಆತ್ಮವಿಶ್ವಾಸ ನೋಡಿ ಖುಷಿಯಾಯಿತು. ಫ್ಯಾಷನ್ ಶೋಗೆ ಬರಲು ನನಗೆ ಖುಷಿಯಾಗುತ್ತದೆ. ಮಿಸ್ಟರ್ ವಿಭಾಗದವರೂ ವಿನೂತನ ರೀತಿಯಲ್ಲಿ ತಯಾರಿ ನಡೆಸಿಕೊಂಡು ಬಂದಿದ್ದರು. ಅವರೆಲ್ಲರಿಗೂ ಅಭಿನಂದನೆಗಳು ಎಂದರು.

ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‍ಫುಲ್‍ನಲ್ಲಿ ಗೆದ್ದ ಸ್ಪರ್ಧಿಗಳು ಜೈಪುರದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಗೆದ್ದವರು ಸಿಂಗಪೂರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement