Connect with us

Bengaluru City

ಗಿನ್ನಿಸ್ ದಾಖಲೆಗಾಗಿ ಓಡುತ್ತಿರೋ ರಾಜಸ್ಥಾನದ ಓಟಗಾರ್ತಿಗೆ ನಾರಾಯಣ ಗೌಡ್ರಿಂದ ಸನ್ಮಾನ

Published

on

ಬೆಂಗಳೂರು: ಗಿನ್ನಿಸ್ ದಾಖಲೆಗಾಗಿ ಓಡುತ್ತಿರುವ ಓಟಗಾರ್ತಿ ಸೂಫಿಯಾರನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ನಾರಾಯಣಗೌಡ ಅವರು ವಿಧಾನಸೌಧದಲ್ಲಿ ಸ್ವಾಗತಿಸಿ, ಸನ್ಮಾನಿಸಿದರು.

ಡಿಸೆಂಬರ್ ನಲ್ಲಿ ಡೆಲ್ಲಿಯಿಂದ ಓಟ ಆರಂಭಿಸಿ, ಇಂದು ಬೆಂಗಳೂರು ತಲುಪಿರುವ ಸೂಫಿಯಾ ಅವರು ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ ಎಂದು ಇದೇ ವೇಳೆ ಸಚಿವರು ಶ್ಲಾಘಿಸಿದರು. ರಾಜಸ್ಥಾನ ಮೂಲದ ಸೂಫಿಯಾ ಡಿಸೆಂಬರ್ 16 ರಂದು ಇಂಡಿಯಾಗೇಟ್ ನಿಂದ ಓಟ ಆರಂಭಿಸಿದ್ದಾರೆ. Run for hope ಹೆಸರಿನಲ್ಲಿ ಓಟ ಆರಂಭಿಸಿರುವ ಸೂಫಿಯಾ 6 ಸಾವಿರ ಕಿ.ಮಿ. ದೂರವನ್ನ 135 ದಿನಗಳ ಒಳಗಾಗಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಪಣತೊಟ್ಟಿದ್ದಾರೆ. Run for hope ಅಂದರೆ ಮಾನವೀಯತೆ, ಏಕತೆ, ಶಾಂತಿ, ಸಮಾನತೆ ಹಾಗೂ ಆರೋಗ್ಯಕರ ಜೀವನ ಶೈಲಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಈ ಓಟ ಆರಂಭಿಸಿದ್ದಾರೆ.

2019 ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 4 ಸಾವಿರ ಕಿ.ಮಿ. ದೂರವನ್ನ ಕೇವಲ 87 ದಿನಗಳಲ್ಲಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ರಾಜಸ್ಥಾನ ಮೂಲದ ಕುಮಾರಿ ಸೂಫಿಯಾ, ಈಗ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಹಂತದಲ್ಲಿದ್ದಾರೆ. ಇಂಡಿಯಾಗೇಟ್ ನಿಂದ ಓಟ ಆರಂಭಿಸಿರುವ ಸೂಫಿಯಾ ಇಂದು ಬೆಂಗಳೂರು ತಲುಪಿದ್ದಾರೆ. ಸುಮಾರು 2400 ಕಿ.ಮೀ. ಕ್ರಮಿಸಿರುವ ಸೂಫಿಯಾ ಚೆನೈ ನತ್ತ ಓಟ ಮುಂದುವರಿಸಿದ್ದಾರೆ.

ಈ ವೇಳೆ ಮಾತನಾಡಿದ ಸಚಿವರು, ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಓಟದಲ್ಲೂ ದಾಖಲೆ ನಿರ್ಮಿಸುತ್ತಿರುವ ಸೂಫಿಯಾ ಅವರ ಕಾರ್ಯಕ್ಕೆ ಶುಭಕೋರಿದರು. ಸೂಫಿಯಾ ಅವರ ಈ ಕಾರ್ಯ ಕ್ರೀಡಾಪಟುಗಳಿಗೆ, ಯುವ ಜನತೆಗೆ ಸ್ಪೂರ್ತಿಯಾಗಿದೆ. ಕ್ರೀಡಾ ಇಲಾಖೆಯ ಸಚಿವನಾಗಿ ಸೂಫಿಯಾ ಅವರನ್ನ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಅಂತ ತಿಳಿಸಿದ್ರು. ಈ ಹಿಂದೆ ಪುಣೆ ಮೂಲದ ಮಿಶೆಲ್ ಕಾಕಡೆ ಎಂಬವರು 190 ದಿನಗಳಲ್ಲಿ 6 ಸಾವಿರ ಕಿ.ಮೀ. ದೂರವನ್ನ ಓಡಿದ್ದರು. ಈಗ 135 ದಿನಗಳ ಒಳಗೆ ಈ ದೂರವನ್ನ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಸೂಫಿಯಾ ಮುಂದಾಗಿದ್ದಾರೆ. ವೇಗದ ಮಹಿಳಾ ರನ್ನರ್ ಎಂಬ ಗೌರವಕ್ಕೆ ಪಾತ್ರರಾಗಿರುವ ಸೂಫಿಯಾ, 2018ರಲ್ಲಿ ಡೆಲ್ಲಿ-ಆಗ್ರಾ-ಜೈಪುರ್ ನಡುವೆ 16 ದಿನಗಳಲ್ಲಿ ಓಡಿ ಗುರಿ ತಲುಪಿದ್ದಾರೆ.

2019ರಲ್ಲಿ 1000, 2000, 3000 ಕಿ.ಮೀ. ಓಡಿದ್ದಾರೆ. ದೆಹಲಿಯಿಂದ ಕೊಲ್ಕತ್ತಾ ಕ್ಕೆ 29 ದಿನಗಳಲ್ಲಿ ಓಡಿ ತಲುಪಿದ್ದಾರೆ. ಸೂಫಿಯಾ ವರ್ಷದ ಹಿಂದೆಯೆ Run for hope ಹೆಸರಿನಲ್ಲಿ ಓಡಿ ದಾಖಲೆ ನಿರ್ಮಿಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ 44 ದಿನಗಳಲ್ಲಿ 2200 ಕಿ.ಮೀ. ಓಡಿ ಅರ್ಧದಲ್ಲೆ ಓಟ ನಿಲ್ಲಿಸಿದ್ರು. ತಮ್ಮ ಕನಸನ್ನು ನನಸು ಮಾಡಲು ಡೆಲ್ಲಿಯಿಂದ ಮತ್ತೆ ಓಟ ಆರಂಭಿಸಿ, ಇಲ್ಲಿವರೆಗೆ ಸಾಗಿ ಬಂದಿದ್ದಾರೆ. ಸೂಫಿಯಾ ಅವರ ಜೊತೆಯಲ್ಲಿ ವಿಕಾಸ ಹಾಗೂ ಗುರ್ಲಿನ್ ಬಂದಿದ್ದಾರೆ. ವಿಕಾಸ್ ಅತ್ಯುತ್ತಮ ಸೈಕ್ಲಿಸ್ಟ್ ಆಗಿದ್ದಾರೆ. ಅಂದಹಾಗೆ ಸೂಫಿಯಾ ಈಗ ದಾಖಲೆ ನಿರ್ಮಿಸಿ, 2023 ರಲ್ಲಿ ಇಡಿ ವಿಶ್ವವನ್ನ ಎರಡು ವರ್ಷಗಳಲ್ಲಿ ಓಡಿ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.

Click to comment

Leave a Reply

Your email address will not be published. Required fields are marked *