Connect with us

Bengaluru City

ಕಟ್ಟಕಡೆಯ ಮನುಷ್ಯನಿಗೂ ಕಡಿಮೆ ದರದಲ್ಲಿ ಮರಳು ಲಭ್ಯ: ಸಚಿವ ನಿರಾಣಿ

Published

on

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ‘ಮನೆಬಾಗಿಲಿಗೆ’ ರಾಜ್ಯ ಸರ್ಕಾರ ಹೋಗುವ ವಿನೂತನ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದರು.

ಇಂದು ವಿಕಾಸಸೌಧದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ನಿಯೋಗವು ಭೇಟಿ ಆಗಿ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ನಿರಾಣಿ, ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯ ನೆರವು ನೀಡಲಿದ್ದೇವೆ. ‘ಉದ್ಯಮಸ್ನೇಹಿ’ ಮಾಡುವುದು ತಮ್ಮ ಮುಂದಿರುವ ಮೊದಲ ಸವಾಲು. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ. ಮರಳು, ಕಲ್ಲು ಕ್ವಾರಿ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

2021- 2026ನೇ ಸಾಲಿನ ಹೊಸ ಮರಳು ನೀತಿ ಜಾರಿಗೆ ಬರಲಿದೆ. ಇದರಲ್ಲಿ ಅನೇಕ ಹೊಸ ಹೊಸ ಸುಧಾರಣೆಗಳನ್ನು ಜಾರಿಗೆ ಮಾಡುತ್ತಿದ್ದೇವೆ. ಕಟ್ಟಕಡೆಯ ಮನುಷ್ಯನಿಗೂ ಸುಲಭವಾಗಿ ಮರಳು ಸಿಗಬೇಕು ಎಂಬುವುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು.

ಬಜೆಟ್‍ನಲ್ಲಿ ಕ್ವಾರಿ ಮತ್ತು ಸ್ಟೋರ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ ಮುಂದಿಟ್ಟಿರುವ ಬೇಡಿಕೆಗಳನ್ನು ಸೇರ್ಪಡೆ ಮಾಡಲಾಗುವುದು. ನೀವು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಅಭಯ ನೀಡಿದರು. ಈಗಾಗಲೇ ಇಲಾಖೆಗಳಲ್ಲಿ ಕೆಲವು ಮಹತ್ವದ ಸುಧಾರಣೆಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಬೇಡಿಕೆ ಈಡೇರಿಸುವೆ: ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ಸ್ ಕೆಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸಚಿವರ ಗಮನಕ್ಕೆ ತಂದರು. ಕಟ್ಟಡ, ಕಲ್ಲು, ಖನಿಜವು ನಿರ್ದಿಷ್ಟವಲ್ಲದ ಖನಿಜವಾಗಿದ್ದು ಇದಕ್ಕಾಗಿ ಕೆ.ಎಂ.ಎಂ.ಆರ್.ಸಿ.ಆರ್. ಕಾಯ್ದೆಯಲ್ಲಿ ಪ್ರತ್ಯೇಕವಾದ ಅಧ್ಯಯನ ರೂಪಿಸುವುದು, 15 ಎಕರೆ ಪ್ರದೇಶದ ವಿಸ್ತೀರ್ಣದ ಮೇಲ್ಪಟ್ಟ ಕ್ವಾರಿಗಳ ಸಮೂಹಕ್ಕೆ ಪ್ರತ್ಯೇಕವಾದ ಕ್ಲಷ್ಟರ್ ಮ್ಯಾಗ್ಸಿನ್‍ನ ಸ್ಥಾಪನೆಗಾಗಿ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಸಚಿವ ನಿರಾಣಿ ಅವರಿಗೆ ಮನವಿ ಮಾಡಿದರು.

ಎಂಎಂಡಿಆರ್ ಕಾಯ್ದೆಯಡಿ 5 ಲಕ್ಷ ರೂ.ನಂತೆ ಪ್ರಕರಣವನ್ನು ಒಮ್ಮೆಗೆ ಇತ್ಯರ್ಥಪಡಿಸುವುದು, ಇಲಾಖೆ ವತಿಯಿಂದ ಈ ಹಿಂದೆ ಕೈಗೊಳ್ಳಲಾದ ಡ್ರೋಣ್ ಸರ್ವೇಯ ವರದಿಯು ಅವೈಜ್ಞಾನಿಕ ಹಾಗೂ ಏಕಪಕ್ಷೀಯವಾಗಿರುವುದರಿಂದ ಅದರ ಆಧಾರದ ಮೇಲೆ ವಿಧಿಸಲಾಗಿರುವ 5 ಪಟ್ಟು ದಂಡವನ್ನು ರದ್ದುಪಡಿಸುವುದು, ಕಲ್ಲು ಗಣಿ ಗುತ್ತಿಗೆದಾರರಿಂದ ಸಾಗಾಣಿಕೆಯ ರಾಜಧನ (ಎಂಡಿಪಿ/ಎಂಡಿಆರ್) ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿದರು.

ಕೆಎಂಎಂಸಿಆರ್ ಕಾಯ್ದೆ 44(3) ತೆರವುಗೊಳಿಸಿ ಕಾಯ್ದೆ 44 (4) ಸಹ ತೆರವು ಮಾಡಬೇಕು, ಕಟ್ಟಡ ಕಲ್ಲಿಗೆ ಸಂಬಂಧಿಸಿದಂತೆ ಡಿಎಂಎಫ್ ಶುಲ್ಕವನ್ನು ಶೇ.10ಕ್ಕೆ ಕಡಿತ, ಸ್ಪಸಿಫೈಡ್ ಮಿನರಲ್ಸ್‍ಗೆ 30 ವರ್ಷಗಳ ಅವಧಿಗೆ ಲೀಸ್ ನೀಡಿರುವಂತೆ ನಾನ್‍ಸ್ಪಸಿಫೈಡ್ ಕಟ್ಟಡದ ಕಲ್ಲುಗುಣಿಗೆ ಗುತ್ತಿಗೆಗೂ ಕೂಡ 30 ವರ್ಷಗಳ ಕಾಲಾವಧಿಯವರೆಗೆ ಲೀಸ್ ಮಂಜೂರು ಮಾಡಬೇಕೆಂದು ಕೋರಿದರು.

ಪಟ್ಟಾ ಜಮೀನಿನಲ್ಲಿ ಕಲ್ಲುಗುಣಿ ಗುತ್ತಿಗೆಗೆ ರಾಜಧನ ಕಡಿಮೆ ಮಾಡಿ ಎಎಪಿಪಿಯನ್ನು ತೆಗೆದುಹಾಕಬೇಕು, ಕ್ರಷರ್ ಮತ್ತು ಎಂಸ್ಟ್ಯಾಂಡ್ ಘಟಕ ಹೊಂದಿರುವವರಿಗೆ 31ಝೆಡ್‍ಸಿ ನಿಯಮದಡಿ ಕಲ್ಲುಗಣಿ ಮಂಜೂರು ಮಾಡಲು ಅವಕಾಶ ಕಲ್ಪಿಸಿ, ಈ ಕಾಯ್ದೆಯು 6 ತಿಂಗಳು ಕಾಲ ಜಾರಿಯಲ್ಲಿದ್ದು ಇದನ್ನು ತೆರವುಗೊಳಿಸಿ ಕಾಯ್ದೆಯನ್ನು ಮುಂದುವರೆಸುವಂತೆ ನಿಯೋಗ ಮನವರಿಕೆ ಮಾಡಿಕೊಟ್ಟಿತ್ತು.

ಈ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಆಲಿಸಿದ ಸಚಿವ ನಿರಾಣಿ ಅವರು ಈಡೇರಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ಗೌರವಾಧ್ಯಕ್ಷ ದತ್ತಾತ್ರಿ.ಎಸ್., ಅಧ್ಯಕ್ಷ ಸಂಜೀವ ಹಟ್ಟಿಹೊಳಿ, ಉಪಾಧ್ಯಕ್ಷರಾದ ಡಿ.ಸಿದ್ದರಾಜು, ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಹಾಜರಿದ್ದರು.

Click to comment

Leave a Reply

Your email address will not be published. Required fields are marked *