Bengaluru City
ಹಿಡ್ಲಮನೆ ಫಾಲ್ಸ್ನ 80 ಅಡಿ ಎತ್ತರದಲ್ಲಿ ಸಿಲುಕಿದ್ದ ಮೆಡಿಕಲ್ ವಿದ್ಯಾರ್ಥಿಯ ರಕ್ಷಣೆ

– ಸತತ 5 ಗಂಟೆ ಕಾರ್ಯಾಚರಣೆ ಬಳಿಕ ಅಪಾಯದಿಂದ ಪಾರು
– 2 ಗಂಟೆ ಕಾಲ ಒಂದೇ ಕಾಲಿನಲ್ಲಿ ನಿಂತ ಪ್ರವಾಸಿಗ
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಸಮೀಪದ ಹಿಡ್ಲಮನೆ ಜಲಪಾತ ವೀಕ್ಷಣೆಗೆ ಬಂದು 80 ಅಡಿಗಳ ಎತ್ತರದಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ.
ಅಗ್ನಿಶಾಮಕ ದಳ, ವನ್ಯಜೀವಿ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ಸತತ 5 ಗಂಟೆ ಕಾರ್ಯಾಚರಣೆ ಬಳಿಕ ಪ್ರವಾಸಿಗನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ಅಮೋಘ, ತಮಿಳುನಾಡು ಮೂಲದ ಸಂಜೀವ್, ಜೈಪುರ ಮೂಲದ ಮಧು ಎಂಬುವವರು ಕೊಡಚಾದ್ರಿ ಪ್ರವಾಸಕ್ಕೆ ಶನಿವಾರ ರಾತ್ರಿ ಬಂದಿದ್ದು ಹೋಂಸ್ಟೇಯಲ್ಲಿ ತಂಗಿದ್ದರು. ಭಾನುವಾರ ಮುಂಜಾನೆ ಜೀಪ್ನಲ್ಲಿ ಕೊಡಚಾದ್ರಿ ಗಿರಿ ಹತ್ತಿದ ಮೂವರು ನಂತರ ನೇರವಾಗಿ ಹಿಡ್ಲಮನೆ ಜಲಪಾತಕ್ಕೆ ತೆರಳಿದ್ದರು. ಮೂವರು ಫಾಲ್ಸ್ ಕೆಳಗಿನಿಂದ ಮೇಲ್ಭಾಗಕ್ಕೆ ತೆರಳಿದ್ದರು. ಆದರೆ ಫಾಲ್ಸ್ ನ ಪಕ್ಕದಲ್ಲೇ ಕೆಳಗಿಳಿಯಲು ಹೋದ ಅಮೋಘ ಅಲ್ಲಿಯೇ ಸಿಲುಕಿಕೊಂಡಿದ್ದಾನೆ. ಇನ್ನಿಬ್ಬರು ಬೇರೆ ಮಾರ್ಗದಿಂದ ಕೆಳಗೆ ಇಳಿದಿದ್ದಾರೆ.
ಮೇಲೆ ಹತ್ತಲು ಆಗದೇ, ಕೆಳಗೆ ಇಳಿಯಲು ಆಗದೇ ಮಧ್ಯದಲ್ಲಿ ಸಿಕ್ಕಿಬಿದ್ದ ಅಮೋಘ ಅಪಾಯಕ್ಕೆ ತುತ್ತಾಗಿದ್ದ. ಅಲ್ಲದೇ ಸಿಕ್ಕ ಕಲ್ಲಿನ ಮೇಲೆ ಒಂದೇ ಕಾಲಿನ ಮೇಲೆ ನಿಂತಿದ್ದನು. ಅಮೋಘ ಅಪಾಯದಲ್ಲಿ ಸಿಲುಕಿದ್ದನ್ನು ನೋಡಿ ಉಳಿದ ಇಬ್ಬರು ಯುವಕರು ಕೂಗಿಕೊಂಡಿದ್ದಾರೆ. ಆಗ ಕೆಳಗಿದ್ದ ಕೆಲ ಪ್ರವಾಸಿಗರು, ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಪಾಯದಿಂದ ತಪ್ಪಿಸಲು ಸಾಧ್ಯವಾಗಿಲ್ಲ. ಕೂಡಲೇ ಅಗ್ನಿಶಾಮಕ ದಳ ಮತ್ತು ವನ್ಯಜೀವಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳೀಯರ ಸಹಕಾರದಿಂದ ಹಗ್ಗವನ್ನು ಬಳಸಿ ಅಪಾಯದಲ್ಲಿ ಸಿಲುಕಿದ್ದ ಅಮೋಘನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಇನ್ಸಪೆಕ್ಟರ್ ಕೆ.ಪಿ.ರಾಮಪ್ಪ, ಹಾಲಪ್ಪ, ಶಿವು, ಹೆಚ್.ಎಂ.ಮಠಪತಿ, ನಾಗರಾಜ್, ವನ್ಯ ಜೀವಿ ಇಲಾಖೆಯ ರೂಪೇಶ ಚವ್ಹಾಣ್, ಸ್ಥಳೀಯ ನಿವಾಸಿಗಳಾದ ಸುಬ್ಬ, ಮಂಜುನಾಥ್, ರಾಜೇಂದ್ರ ಶೆಟ್ಟಿ, ಅಶೋಕ ಕುಂಬ್ಳೆ, ಇತರರು ಪಾಲ್ಗೊಂಡಿದ್ದರು.
