Connect with us

Cinema

`ಮಂಗಳವಾರ ರಜಾದಿನ’ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ

Published

on

ಚಿತ್ರ: ಮಂಗಳವಾರ ರಜಾದಿನ
ನಿರ್ದೇಶನ: ಯುವಿನ್
ನಿರ್ಮಾಪಕ: ತ್ರಿವರ್ಗ ಫಿಲಂಸ್
ಸಂಗೀತ ನಿರ್ದೇಶನ: ಋತ್ವಿಕ್ ಮುರಳಿಧರ್, ಪ್ರಜೋತಾ ಡೇಸಾ
ಛಾಯಾಗ್ರಹಣ: ಉದಯ್ ಲೀಲಾ
ಕಲಾವಿದರು: ಚಂದನ್ ಆಚಾರ್. ಲಾಸ್ಯ ನಾಗರಾಜ್, ಹರಿಣಿ, ರಜನಿಕಾಂತ್, ಜಹಂಗೀರ್, ಇತರರು

ಯುವಿನ್ ನಿರ್ದೇಶನದ ಮೊದಲ ಸಿನಿಮಾ, ಚಂದನ್ ಆಚಾರ್ ನಾಯಕ ನಟನಾಗಿ ಅಭಿನಯಿಸಿರುವ `ಮಂಗಳವಾರ ರಜಾದಿನ’ ಇಂದು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಟೈಟಲ್‍ನಿಂದಲೇ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದವು. ಸಿನಿಮಾ ಮೇಲೂ ಪ್ರೇಕ್ಷಕ ಪ್ರಭುಗಳು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ರು ಇದೀಗ ಮೊದಲ ದಿನವೇ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದೆ.

 

`ಮಂಗಳವಾರ ರಜಾದಿನ’ ಚಿತ್ರ ಟೈಟಲ್ ಹೇಳುವಂತೆ ಕ್ಷೌರಿಕನ ಸುತ್ತ ಹೆಣೆಯಲಾದ ಸಿನಿಮಾ. ಚಿತ್ರದ ನಾಯಕ ಕಟಿಂಗ್ ಕುಮಾರನಿಗೆ ಚಿಕ್ಕಂದಿನಿಂದಲೂ ನಟ ಕಿಚ್ಚ ಸುದೀಪ್ ಅಂದ್ರೆ ಪಂಚಪ್ರಾಣ. ಪೇಪರ್‍ನಲ್ಲಿ ಬರುತ್ತಿದ್ದ ಸುದೀಪ್ ಪೋಟೋವನ್ನು ಕತ್ತರಿಸಿ ಇಟ್ಟುಕೊಳ್ಳುತ್ತಿದ್ದ ಹುಡುಗನಿಗೆ ಎಂದಾದರೊಮ್ಮೆ ಸುದೀಪ್‍ಗೆ ಹೇರ್ ಸ್ಟೈಲ್ ಮಾಡಬೇಕೆಂಬ ದೊಡ್ಡ ಕನಸು. ಹೀಗೆ ಕಿಚ್ಚ ಸುದೀಪ್‍ಗೆ ಹೇರ್ ಸ್ಟೈಲ್ ಮಾಡಬೇಕು ಎಂದು ಹೊರಟ ನಾಯಕನ ಬದುಕು ಹೇಗೆ ಅಡಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾಗಿ ಪೇಚಾಟಕ್ಕೆ ಸಿಲುಕುತ್ತದೆ ಎಂಬುದರ ಸುತ್ತಾ `ಮಂಗಳವಾರ ರಜಾದಿನ’ ಸಿನಿಮಾ ಹೆಣೆಯಲಾಗಿದೆ. ನಟ ಸುದೀಪ್‍ಗೆ ಹೇರ್ ಕಟ್ ಮಾಡುವ ಅವಕಾಶ ಕಟಿಂಗ್ ಕುಮಾರನಿಗೆ ಸಿಗುತ್ತಾ ಎಂಬ ಕುತೂಹಲ ನಿಮ್ಮಲಿದ್ರೆ ಖಂಡಿತಾ ಈ ಸಿನಿಮಾ ನೋಡಲೇಬೇಕು.

ಕ್ಷೌರಿಕನ ಕೆಲಸ ನಿರ್ವಹಿಸುವ ತಂದೆ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದು, ಕಟಿಂಗ್ ಕುಮಾರನ ತಂದೆಯಾಗಿ ಅವರ ಅಭಿನಯ ಮನಮುಟ್ಟುತ್ತದೆ. ಮಗನಿಗೆ ಒಳ್ಳೆಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ತಂದೆ ಯಾವ ರೀತಿ ಪ್ರಯತ್ನ ಪಡುತ್ತಾರೆ ಎಂಬುದರ ಮೂಲಕ ತಂದೆ ಮಗನ ಬಾಂಧವ್ಯವನ್ನು ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕ ಯುವಿನ್ ತಂದೆ ಮಗನ ನಡುವೆ ಉಂಟಾಗುವ ಭಿನ್ನಾಭಿಪ್ರಾಯ, ವಾಗ್ವಾದ, ಕನಸು ನನಸು ಮಾಡಿಕೊಳ್ಳುವ ಭರದಲ್ಲಿ ಕಟಿಂಗ್ ಕುಮಾರನ ಎಡವಟ್ಟುಗಳು, ಇದರೊಂದಿಗೆ ಪ್ರೀತಿ, ಸ್ನೇಹಿತರಿಂದಾದ ವಂಚನೆ, ಮನೆಯಲ್ಲಿನ ಸಮಸ್ಯೆಗಳು ಸಿನಿಮಾದಲ್ಲಿ ಬೆರೆತಿದ್ದು ಕಾಮಿಡಿ ಜೊತೆಗೆ ಭಾವನಾತ್ಮಕ ಅಂಶಗಳು ಸೇರಿ `ಮಂಗಳವಾರ ರಜಾದಿನ’ ಸಿನಿಮಾ ನಗಿಸುವುರ ಜೊತೆ ಒಂದಿಷ್ಟು ಭಾವನಾತ್ಮಕವಾಗಿಯೂ ಸೆಳೆಯುತ್ತದೆ.

ನಿರ್ದೇಶಕ ಯುವಿನ್ ತಮ್ಮ ಮೊದಲ ಸಿನಿಮಾವಾದರೂ ಅಚ್ಚುಕಟ್ಟಾಗಿ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಪ್ರೇಕ್ಷಕರನ್ನು ನಗಿಸುವಲ್ಲಿ, ಹಿಡಿದಿಟ್ಟುಕೊಳ್ಳುವಲ್ಲಿ ಯುವಿನ್ ಯಶಸ್ವಿಯಾಗಿದ್ದಾರೆ. ನಾಯಕನ ಪಾತ್ರದಲ್ಲಿ ಚಂದನ್ ಆಚಾರ್ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದು ಎಲ್ಲರ ಗಮನ ಸೆಳೆಯುತ್ತಾರೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಚಿತ್ರದ ಸಂಗೀತ ಹಾಗೂ ಉದಯ್ ಲೀಲಾ ಕ್ಯಾಮೆರಾ ವರ್ಕ್ ಎಲ್ಲರ ಗಮನ ಸೆಳೆಯುತ್ತದೆ.

ರೇಟಿಂಗ್ : 3.5/5

Click to comment

Leave a Reply

Your email address will not be published. Required fields are marked *