Connect with us

Bengaluru City

ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಆತ್ಮಹತ್ಯೆ

Published

on

ಬೆಂಗಳೂರು: ನಗರದ ವಿಶಾಲ್ ಮಾರ್ಟ್ ಬಳಿ ಇಂದು ಬೆಳಗ್ಗೆ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯುವತಿ ನಿತ್ಯಶ್ರೀ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಗಿರೀಶ್ ತಾವರೆಕೆರೆ ವ್ಯಾಪ್ತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭಿಸಿದೆ. ಮದುವೆ ನಿರಾಕರಿಸಿದ್ದ ಕಾರಣಕ್ಕೆ ಆರೋಪಿ ಗಿರೀಶ್ ಯುವತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಕೂಡಲೇ ಪ್ರಕರಣ ತನಿಖೆ ಮುಂದಾದ ಪೊಲೀಸರಿಗೆ ಆರೋಪಿ ಕೂಡ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಕುರಿತು ಅನುಮಾನ ಮೂಡಿತ್ತು. ಆದ್ದರಿಂದ ಪೊಲೀಸರು ಆರೋಪಿಯ ಪತ್ತೆಗೆ ತ್ವರಿತ ಕಾರ್ಯಾಚರಣೆ ನಡೆಸಿದ್ದರು.

ತಾವರೆಕರೆ ಬಳಿಯ ತೋಪಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಮೃತ ಯುವಕ ಗಿರೀಶ್ ಎಂದು ಖಚಿತ ಪಡಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಗಿರೀಶ್ ಘಟನೆಯಲ್ಲಿ ಆಕೆ ಸಾವನ್ನಪ್ಪಿರುತ್ತಾಳೆ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು, ಈ ಅನುಮಾನ ಸದ್ಯ ನಿಜವಾಗಿದೆ.

ಏನಿದು ಘಟನೆ?
ಗಿರೀಶ್ ಮತ್ತು ನಿತ್ಯಶ್ರೀ ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುವ ವೇಳೆ ಪ್ರೀತಿ ಮಾಡುತ್ತಿದ್ದರು. ನಂತರ ಓದು ಮಗಿದ ಮೇಲೆ ನಿತ್ಯಶ್ರೀ ಮಂಡ್ಯದಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ವಾಸವಿದ್ದ ನಿತ್ಯಶ್ರೀ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಗಿರೀಶ್ ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿದ್ದು, ಕಳೆದ ಕೆಲವು ತಿಂಗಳಿಂದ ಇಬ್ಬರ ನಡುವೆ ಬಿನ್ನಾಭಿಪ್ರಾಯ ಉಂಟಾಗಿತ್ತು.

ಈ ಹಿಂದೆ ಇಬ್ಬರ ಪ್ರೀತಿಯ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ರಾಜಿ ಮಾಡಿಕೊಂಡು ಸುಮ್ಮನಾಗಿರುವುದಾಗಿ ಇಬ್ಬರು ಹೇಳಿದ್ದರು. ಆದರೆ ಈ ನಡುವೆ ಮತ್ತೆ ಗಿರೀಶ್ ನಿತ್ಯಶ್ರೀಗೆ ಕಾಟಕೊಡುತ್ತಿದ್ದ. ಈ ಕಾರಣದಿಂದಲೇ ನಿತ್ಯಶ್ರೀಗೆ ಆಕೆಯ ಮನೆಯವರು ಮುಂದಿನ ಜೂನ್ ತಿಂಗಳಲ್ಲಿ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದನ್ನು ತಿಳಿದ ಗಿರೀಶ್ ಇಂದು ಯುವತಿ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಕೆಲಸಕ್ಕೆ ರಾಜೀನಾಮೆ ನೀಡಲು ತೆರಳಿದ್ದ ವೇಳೆ ಮಂಡ್ಯದಿಂದ ಬಂದು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿರುವ ನಿತ್ಯಶ್ರೀ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.