Connect with us

Bengaluru City

ಏಕಾಂಗಿಯಾಗಿ ಸ್ಪರ್ಧೆ ಮಾಡಿ ಅಧಿಕಾರಕ್ಕೆ ಬರ್ತೀವಿ: ಹೆಚ್‍ಡಿಕೆ

Published

on

– 2023 ಜನತಾದಳದ ರಾಜ್ಯವಾಗುತ್ತೆ
– ಡಿಕೆಶಿ ವಿರುದ್ಧ ಮಾಜಿ ಸಿಎಂ ಕಿಡಿ

ಬೆಂಗಳೂರು: ಜೆಡಿಎಸ್ 2023 ರಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೆ. ಯಾರ ಜೊತೆಯೂ ಹೊಂದಾಣಿಕೆ ಇಲ್ಲ. ಯಾರ ಜೊತೆ ವಿಲೀನವೂ ಇಲ್ಲ. ಏಕಾಂಗಿಯಾಗಿ ಸ್ಪರ್ಧೆ ಮಾಡಿ ಅಧಿಕಾರಕ್ಕೆ ಬರ್ತೀವಿ. 2023 ಜನತಾದಳದ ರಾಜ್ಯವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ವಿಲೀನ ಮಾಡಲ್ಲ. ಹೊಂದಾಣಿಕೆ ಚುನಾವಣೆ ಮಾಡಲ್ಲ. ಜೆಡಿಎಸ್ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೆ. 2023ಕ್ಕೆ ಏಕಾಂಗಿ ಸ್ಪರ್ಧೆ ಮಾಡ್ತೀವಿ. ಪಕ್ಷವನ್ನ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡ್ತೀವಿ. ಸ್ವತಂತ್ರವಾಗಿ ಅಧಿಕಾರ ಕೊಟ್ರೆ ಏನ್ ಕೆಲಸ ಮಾಡ್ತೀವಿ ಅಂತ ಜನರಿಗೆ ಹೇಳ್ತೀನಿ. ಬೂತ್ ಮಟ್ಟಕ್ಕೆ ನಾನೇ ಹೋಗಿ ಸಂಘಟನೆ ಮಾಡ್ತೀವಿ ಎಂದು ಹೇಳಿದರು.

ಗ್ರಾಮ ಸ್ವರಾಜ್ ಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಪಾಪದ ಹಣದಲ್ಲಿ ಗ್ರಾಮ ಸ್ವರಾಜ್ ಗೆ ಹಣ ಚೆಲ್ಲಿದ್ದಾರೆ. ಯಾವ ಜನರ ಸೇವೆ ಈ ಸರ್ಕಾರ ಮಾಡಿದೆ. ಕಾರ್ಮಿಕ ಇಲಾಖೆ ಹಣ ಏನ್ ಮಾಡಿದ್ರು. ಕೈಗಾರಿಕೆಗಳು ಏನು ಆಗಿವೆ. ಬಿಜೆಪಿಯ ಒಳಗೆ ಅಸಮಾಧಾನ ಇದೆ. ಶಾಸಕರೇ ಅನುದಾನ ಕೊಡ್ತಿಲ್ಲ ಅಂತ ಮಾತಾಡ್ತಿದ್ದಾರೆ. ನಮ್ಮ ಕಾರ್ಯಕರ್ತರ ಸ್ವಾಭಿಮಾನ ಅಡ ಇಡಲು ಸಾಧ್ಯವಿಲ್ಲ. 2023ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ ಅಂತ ಮತ್ತೊಮ್ಮೆ ಉಚ್ಛರಿಸಿದರು.

ಅರುಣ್ ಸಿಂಗ್ ಜೊತೆ ಯಾರೂ ಮಾತಾಡಿಲ್ಲ. ವಿಲೀನ ಮಾಡ್ತೀವಿ ಅಂತ ಅರ್ಜಿ ಹಾಕಿಲ್ಲ. ಅನುದಾನದ ವಿಚಾರವಾಗಿ ಯಡಿಯೂರಪ್ಪರನ್ನ ನಾನು ಭೇಟಿ ಆಗಿದ್ದೇನೆ. ರಾಜಕೀಯವಾಗಿ ನಾನು ಯಡಿಯೂರಪ್ಪ ಜೊತೆ ಚರ್ಚೆ ಮಾಡಿಲ್ಲ. ಯಾಕೆ ಹೀಗೆ ಮಾತಾಡ್ತಾರೋ ಗೊತ್ತಿಲ್ಲ. ಜೆಡಿಎಸ್ ಮುಗಿದೇ ಹೋಯ್ತು ಅಂತಾರೆ. ಈ ಪಕ್ಷವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಗರಂ ಆದರು.

ಗ್ರಾಮ ಪಂಚಾಯ್ತಿ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ, ಕಾಂಗ್ರೆಸ್, ಬಿಜೆಪಿ ನಾವು ಜಾಸ್ತಿ ಸ್ಥಾನ ಪಡೆದಿದ್ದೇವೆ ಅಂತ ಕಿತ್ತಾಡುತ್ತಿದ್ದಾರೆ. ಪಂಚಾಯ್ತಿ ಉದ್ಧಾರ ಮಾಡ್ತೀನಿ ಅಂತ ರಮೇಶ್ ಕುಮಾರ್, ಎಚ್.ಕೆ.ಪಾಟೀಲ್ ಸಮಿತಿ ಕೊಟ್ಟ ವರದಿ ಏನ್ ಆಯ್ತು. ಎಲ್ಲಿ ಎಲ್ಲಿ ಯಾರ್ ಗೆದ್ದಿದ್ದಾರೆ ಅಂತ ನಾನು ಹೇಳಬಲ್ಲೆ. ಇದು ಪಕ್ಷದ ಚಿಹ್ನೆ ಮೇಲೆ ನಡೆಯೋ ಚುನಾವಣೆ ಅಲ್ಲ. ನಿಜವಾದ ಚುನಾವಣೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯ್ತಿಯಲ್ಲಿ ನಡೆಯುತ್ತೆ ಎಂದರು.

ಲೂಟಿ ಹೊಡೆದ ಹಣದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಮಾಡಿದ್ದಾರೆ. ಈಗ ಗೃಹ ಮಂತ್ರಿಗಳು ಬರ್ತಿದ್ದಾರೆ ಅಂತ ಜನ ಸೇವಕ್ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಯಾವ ಜನರ ಸೇವೆ 14 ತಿಂಗಳ ಸರ್ಕಾರದಲ್ಲಿ ಇವರು ಮಾಡಿದ್ದಾರೆ. ಬಿಜೆಪಿ ಅವರು ಹೆಸರು ಚೆನ್ನಾಗಿ ಇಡ್ತಾರೆ. ಇಂತಹ ಹೆಸರು ಇಟ್ಟೇ ಇಟ್ಟು ಬಿಜೆಪಿ ಅವರು ಇಷ್ಟು ದಿನ ಅಧಿಕಾರ ಮಾಡಿದ್ರು. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರ ಪಡೆಯಿಂದ ಇರೋ ಜೆಡಿಎಸ್ ನ್ನು ಅಡ ಇಡಲು ಸಾಧ್ಯವೇ. ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಲಿನ ಬಗ್ಗೆ ಕುಮಾರಸ್ವಾಮಿ ವಿರುದ್ಧ ಮಾತಾಡಿದ್ದ ಡಿಕೆ ಶಿವಕುಮಾರ್‍ಗೆ ತಿರುಗೇಟು ನೀಡಿದ ಮಾಜಿ ಸಿಎಂ, ದೇವೇಗೌಡರನ್ನ ಪ್ರಧಾನಿ ಮಾಡಿ ಅಂತ ನಾವು ಯಾರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಪ್ರಧಾನಿ ಮಾಡಿ ಅಂತ ನಾವು ಅರ್ಜಿ ಹಾಕಿಕೊಂಡು ಹೋಗಿರಲಿಲ್ಲ. ದೇವೇಗೌಡರ ಮನೆ ಬಾಗಿಲಿಗೆ ಬಂದು ಗೋಗರಿದದ್ದು ಅವರೇ. ದೇವೇಗೌಡರು ಕರ್ನಾಟಕ ಬಿಟ್ಟು ಹೋಗೊಲ್ಲ ಅಂತ ಹೇಳಿದ್ರು. ಕಾಂಗ್ರೆಸ್ ಅವರು ಗತಿ ಇಲ್ಲದೆ ದೇವೇಗೌಡರ ಮನೆ ಬಳಿ ಬಂದಿದ್ದರು. ನಾನು ಗಾಂಧಿಜೀ ಕಾಲದ ಕಾಂಗ್ರೆಸ್ ಶಾಲಿನ ಬಗ್ಗೆ ಮಾತಾಡಿಲ್ಲ. ಇವತ್ತಿನ ಕಾಂಗ್ರೆಸ್ ಶಾಲಿನ ಬಗ್ಗೆ ನಾನು ಮಾತಾಡಿರೋದು. ಈಗಿರುವ ಕಾಂಗ್ರೆಸ್ ಗಾಂಧಿಯವರ ಕಟ್ಟಿದ ಕಾಂಗ್ರೆಸ್ಸಾ?, ಅವರು ದುಡಿಮೆ ಮಾಡಿದ ಕಾಂಗ್ರೆಸ್ ಇದು ಎಂದು ಪ್ರಶ್ನಿಸಿದರು.

ನಾನು ಹೇಳಿದ್ದು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಶಾಲ್ ಬಗ್ಗೆ. ಅಧಿಕಾರ ಇದ್ದಾಗ ಡಿಕೆ ಶಿವಕುಮಾರ್ ಹೇಗೆ ಕೆಲಸ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಕನಕಪುರಕ್ಕೆ ಹೋಗಿ ನೋಡಿದ್ರೆ ಏನ್ ಮಾಡಿದ್ದಾರೆ ಅಂತ ಗೊತ್ತಾಗುತ್ತೆ. ಬಂಡೆಗಳು ಹೊಡೆಯುತ್ತಿದ್ದರೆ ಯಾವ್ ಯಾವ ರೈತರಿಗೆ ಏನ್ ಮಾಡಿದ್ರು ಅಂತ ಅವ್ರೇ ಹೇಳ್ತಾರೆ. ನನ್ನ ಹತ್ರ ಇವೆಲ್ಲ ನಡೆಯೋದಿಲ್ಲ. ನನ್ನ ಸಿಎಂ ಮಾಡಿ ಅಂತ ನಾನು ನಿಮ್ಮ ಬಳಿ ಬಂದಿರಲಿಲ್ಲ. ನೀವೇ ಬಂದಿದ್ದು ಅಲ್ಲವೇ. ಯಾರ ಬಳಿಯೂ ನಾನು ಸಿಎಂ ಮಾಡಿ ಅಂತ ಹೋಗಿರಲಿಲ್ಲ. ಅವರಿಗೆ ದರ್ದು ಇತ್ತು ಸಿಎಂ ಮಾಡಿದ್ರು ಎಂದು ಕೈ ವಿರುದ್ಧ ಹೆಚ್‍ಡಿಕೆ ಕಿಡಿಕಾರಿದರು.

ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಅವರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಬಿಜೆಪಿ ವಿಚಾರ ನಾನು ಯಾಕೆ ತಲೆ ಬಿಸಿ ಮಾಡಿಕೊಳ್ಳಲಿ. ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ನಿನ್ನೆ ಬೇರೆ ಸಿಎಂ ಬದಲಾವಣೆ ಮಾಡಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಬೇರೆ ಎನೇನೋ ಹೇಳ್ತಿದ್ದಾರೆ. ಅವರಿಗೆ ಯಾರು ಮಾಹಿತಿ ಕೊಟ್ರೋ ಗೊತ್ತಿಲ್ಲ. ಆದ್ರೆ ಸರ್ಕಾರ ಇನ್ನೂ ಎರಡೂವರೆ ವರ್ಷ ಇರುತ್ತೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಜೊತೆ ಉತ್ತಮ ಬಾಂಧವ್ಯ ಇದೆ ಅನ್ನೋ ಮಾತಿನ ಮರ್ಮ ವಿಚಾರ ಸಂಬಂಧ ಮಾತನಾಡಿದ ಮಾಜಿ ಸಿಎಂ, ಬಿಜೆಪಿ ನಾಯಕರಿಗಿಂತ ನನ್ನ ಜೊತೆ ಉತ್ತಮ ಬಾಂಧವ್ಯ ಇದೆ ಅಂತ ಹೇಳಿದ್ದೇನೆ. ನಾನು ಸಿಎಂ ಆಗಿದ್ದಾಗ ನಾನೇ ಏನೇ ಸಮಸ್ಯೆ ತೆಗೆದುಕೊಂಡು ಹೋದಾಗ ನನ್ನ ಜೊತೆ ಉತ್ತಮವಾಗಿ ಸ್ಪಂದನೆ ನೀಡಿ, ಗೌರವ ಕೊಟ್ಟಿದ್ದಾರೆ. ನಾನು ಅದನ್ನ ಸ್ಮರಿಸಿಕೊಂಡಿದ್ದೇನೆ ಅಷ್ಟೆ ಎಂದರು.

Click to comment

Leave a Reply

Your email address will not be published. Required fields are marked *

www.publictv.in