Tuesday, 18th February 2020

ನಿಮಗೂ ಈ ರೀತಿ ಆಗಬಹುದು ಎಚ್ಚರ – ಗೂಗಲ್ ಪೇ ಮೂಲಕ 1 ರೂಪಾಯಿ ಹಾಕಿ 97 ಸಾವಿರ ಎಗರಿಸಿದ

ಬೆಂಗಳೂರು: ಆನ್‍ಲೈನ್ ವ್ಯವಹಾರವನ್ನು ಖದೀಮರು ಹೇಗೆ ಬಂಡವಾಳ ಮಾಡಿಕೊಂಡು ಅಮಾಯಕರ ಹಣವನ್ನ ದೋಚುತ್ತಿದ್ದಾರೆ ಅನ್ನೋದಕ್ಕೆ ಈ ಘಟನೆ ನೈಜ ಉದಾರಣೆಯಾಗಿದೆ.

ಮಹಿಳೆಯ ಗೂಗಲ್ ಪೇ ಖಾತೆಗೆ ಒಂದು ರೂಪಾಯಿ ಹಾಕಿ ಒರೋಬ್ಬರಿ 97 ಸಾವಿರ ಹಣವನ್ನ ದೋಚಿರುವ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ. ಬ್ರಿಂದಾ ದೇಸಾಯಿ ಎಂಬವರು ಪೀಠೋಪಕರಣಗಳನ್ನು ಮಾರಾಟ ಮಾಡಲೆಂದು ಒಎಲ್‍ಎಕ್ಸ್ ನಲ್ಲಿ ಹಾಕಿದ್ದಾರೆ. ಬೆಳಗ್ಗೆ ಹಾಕಿ ಸಂಜೆಗೆ ವ್ಯಕ್ತಿಯೊಬ್ಬ ಕರೆ ಮಾಡಿ ನೀವು ಒಎಲ್‍ಎಕ್ಸ್ ನಲ್ಲಿ ಹಾಕಿರುವ ಪೀಠೋಪಕರಣವನ್ನು ಖರಿದೀಸುವುದಾಗಿ ಹೇಳಿದ್ದಾನೆ.

ನನ್ನ ಹೆಸರು ದೀಪಕ್ ಕಪೂರ್, ನಾನು ಮಿಲಿಟರಿ ಕ್ಯಾಂಟಿನ್‍ನಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಮಹಿಳೆ ಹಣ ಹೇಗೆ ಕೊಡುತ್ತೀರಾ ಎಂದು ದೀಪಕ್ ಕಪೂರ್ ಗೆ ಕೇಳಿದ್ದಾರೆ. ಗೂಗಲ್ ಪೇ ಮೂಲಕ ಕಳಿಸಿಕೊಡುವುದಾಗಿ ಹೇಳಿ ಮಹಿಳೆಯ ಗೂಗಲ್ ಪೇ ಗೆ ಒಂದು ರೂಪಾಯಿ ಕಳಿಸಿಕೊಟ್ಟಿದ್ದಾನೆ. ನಂತರ ಮತ್ತೊಂದು ಕ್ಯೂಆರ್ ಕೋಡ್ ಕಳಿಸಿದ್ದಾನೆ. ಮಹಿಳೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮತ್ತೊಂದು ರೂಪಾಯಿ ಮಹಿಳೆಯ ಗೂಗಲ್ ಪೇಗೆ ಬಂದಿದೆ.

ನಂತರ 10 ಸಾವಿರದ ಕ್ಯೂಆರ್ ಕೋಡ್ ಕಳಿಸಿ ಇದನ್ನು ಸ್ಕ್ಯಾನ್ ಮಾಡಿ ಪಿನ್ ನಂಬರ್ ಕಳಿಸಲು ಮಹಿಳೆಗೆ ಹೇಳಿದ್ದಾನೆ. ಮಹಿಳೆ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮಹಿಳೆಯ ಅಕೌಂಟ್‍ನಿಂದ ಹತ್ತು ಸಾವಿರ ಹಣ ಆತನ ಖಾತೆಗೆ ವರ್ಗಾವಣೆ ಆಗಿದೆ. ಮಹಿಳೆ ಕಟ್ಟಾದ ಹಣದ ಬಗ್ಗೆ ಕರೆಮಾಡಿ ಕೇಳಿದಾಗ ಮರಳಿ ನಿಮ್ಮ ಅಕೌಂಟಿಗೆ ಕಳುಹಿಸುವುದಾಗಿ ಹೇಳಿ ಎಂಟು ಬಾರಿ ಕ್ಯೂಆರ್ ಕೋಡ್ ಕಳಿಸಿ ಬರೋಬ್ಬರಿ 97 ಸಾವಿರ ಹಣ ಎಗರಿಸಿಕೊಂಡು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಸದ್ಯ ಈ ಸಂಬಂಧ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *