Connect with us

Bengaluru City

ಶೀಘ್ರದಲ್ಲೇ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್‍ಗೆ: ಮಧು ಬಂಗಾರಪ್ಪ

Published

on

– ಶಿವಣ್ಣ ಪತ್ನಿ ಬಗ್ಗೆ ಡಿಕೆಶಿ ಹೇಳಿದ್ದೇನು..?

ಬೆಂಗಳೂರು: ನಾನು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಶೀಘ್ರವೇ ಗೀತಾ ಶಿವರಾಜ್ ಕುಮಾರ್ ಕೂಡ ಪಾರ್ಟಿಗೆ ಬರುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಇಂದು ಸದಾಶಿವನಗರದಲ್ಲಿ ಡಿಕೆಶಿ ಭೇಟಿಯಾದ ಮಧು ಬಂಗಾರಪ್ಪ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಧಿಕೃತವಾಗಿ ಪಕ್ಷ ಸೇರ್ಪಡೆ ಒಂದು ಕಡೆ ಇರಲಿ. ನಾನು ನಿನ್ನೆಯಿಂದ ಪಕ್ಷದಲ್ಲಿ ಆಕ್ಟಿವ್ ಆಗಿದ್ದೇನೆ. ಗೀತಾ ಶಿವರಾಜ್ ಕುಮಾರ್ ಸಹಾ ಪಾರ್ಟಿಗೆ ಬರುತ್ತಾರೆ. ಮಾತುಕತೆ ಆಗಿದೆ. ಬಂದಿದ್ದಾರೆ ಅಂದುಕೊಳ್ಳಿ ಎಂದು ತಿಳಿಸಿದರು.

ಜೆಡಿಎಸ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ. ಅದರ ಬಗ್ಗೆ ಮತ್ತೆ ಮಾತಾಡೋದು ಬೇಡ. ಕುಮಾರಸ್ವಾಮಿ ಅವರು ಏನೇ ಮಾತನಾಡಲಿ ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಬಗ್ಗೆ ನನಗೆ ಗೌರವ ಇದೆ. ಹತ್ತು ವರ್ಷದ ಹಿಂದೆ ಏನಾಯ್ತು ಅನ್ನೋದು ಈಗ ಬೇಡ ಎಂದರು.

ಇದೇ ವೇಳೆ ಡಿಕೆಶಿ ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಸಾಮಾನ್ಯ ಹೆಣ್ಣು ಮಗಳಲ್ಲ. ಅವರ ಪಕ್ಷದ ಕಷ್ಟದ ದಿನದಲ್ಲಿ ಸ್ಪರ್ಧೆ ಮಾಡಿದವರು. ದೇಶದಲ್ಲಿ ಒಂದು ರೆಪ್ಯುಟೆಡ್ ಫ್ಯಾಮಿಲಿ ಅವರದ್ದಾಗಿದೆ. ಅವರನ್ನು ಹೇಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು. ಹೈಕಮಾಂಡ್ ಜೊತೆಗೆ ಮಾತುಕತೆ ಮಾಡಬೇಕಿದೆ ಎಂದು ಹೇಳಿದರು.

ನನ್ನ ರಾಜಕಾರಣದ ವಿದ್ಯಾರ್ಥಿ ಘಟಕದಿಂದ ನನ್ನನ್ನ ಗುರುತಿಸಿ ಬೆಳೆಸಿದ ಧೀಮಂತ ನಾಯಕ ಬಂಗಾರಪ್ಪ. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು. ಇಲ್ಲಿವರೆಗೆ ಬಂದು ತಲುಪಿದ್ದೇನೆ. ಅವರ ಪುತ್ರ ಮಧು ಬಂಗಾರಪ್ಪ. ಬಹಳ ವರ್ಷದಿಂದ ನಾನು ಅವರಿಗೆ ಗಾಳ ಹಾಕಿಕೊಂಡು ಬಂದಿದ್ದೆ. ಬಂಗಾರಪ್ಪ ಪಕ್ಷ ಬಿಟ್ಟು ಹೋದ ಬಗ್ಗೆ ಜಾಸ್ತಿ ಮಾತನಾಡಲ್ಲ. ಆಕಾಶದಿಂದ ಬಿದ್ದ ಹನಿ ಮಳೆಯಾಗಿ ಸಮುದ್ರ ಸೇರಲೇಬೇಕು. ಕಾಂಗ್ರೆಸ್ ವರಿಷ್ಠರು ಮಧು ಸೇರ್ಪಡೆಗೆ ಒಪ್ಪಿದ್ದಾರೆ. ಅವರ ರಕ್ತ, ಜನ್ಮ ಎಲ್ಲವು ಕಾಂಗ್ರೆಸ್ ಆಗಿದೆ ಎಂದು ತಿಳಿಸಿದರು.

ನನಗೆ ಟಾರ್ಗೆಟ್ ಜೆಡಿಎಸ್ ಅಂತ ಏನು ಇಲ್ಲ. ನಮಗೆ ನಮ್ಮ ಪಕ್ಷ ಸಂಘಟನೆ ಮುಖ್ಯ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾವುದೇ ಪಕ್ಷದಿಂದ ಯಾರೇ ಬಂದರು ಸ್ವಾಗತ. ಗ್ರಾಮ ಪಂಚಾಯ್ತಿ ಸದಸ್ಯ ಇರಬಹುದು. ಒಬ್ಬ ಮತದಾರ ಇರಬಹುದು ಎಲ್ಲರನ್ನು ಸ್ವಾಗತಿಸುತ್ತೇವೆ. ನಮ್ಮ ಗುರಿ ಈ ರಾಜ್ಯದಿಂದ ಈ ದೇಶದಿಂದ ಬಿಜೆಪಿ ದೂರವಿಡಬೇಕು ಎಂದರು.

ಸಿ.ಡಿ. ಪ್ರಕರಣದ ಬಗ್ಗೆ ಎಸ್.ಐ.ಟಿ. ರಚನೆ ಮಾಡಿದ್ದಾರೆ. ನಾವೆಲ್ಲ ಪಕ್ಷದ ನಾಯಕರು ಕುಳಿತು ಚರ್ಚೆ ಮಾಡ್ತೇವೆ. ಎಸ್.ಐ.ಟಿ. ರಚನೆ ಮಾಡಲಿ, ನೋಡೋಣ. ಕೆಲ ನಾಯಕರು ನಮ್ಮ ಪಕ್ಷದ ಹೆಸರು, ನಮ್ಮ ಹೆಸರು ತಗೊಂಡಿದ್ದಾರೆ. ತನಿಖೆ ನಡೆಯುತ್ತಿದೆ ನೋಡೋಣ. ನಾವು ಆಂತರಿಕವಾಗಿ ಮಾತುಕತೆ ಮಾಡುತ್ತೇವೆ. ನೋಡೋಣ ತನಿಖೆಯಲ್ಲಿ ಎಲ್ಲಾ ಗೊತ್ತಾಗಬೇಕಲ್ಲ ಎಂದು ಡಿಕೆಶಿ ತಿಳಿಸಿದರು.

Click to comment

Leave a Reply

Your email address will not be published. Required fields are marked *