Connect with us

Bengaluru City

ಪುನೀತ್ ಅಭಿನಯದ ಅಂಜನಿಪುತ್ರ ಪ್ರದರ್ಶನಕ್ಕೆ ಬ್ರೇಕ್

Published

on

ಬೆಂಗಳೂರು: ಪುನೀತ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.

ವಕೀಲ ಜಿ. ನಾರಾಯಣಸ್ವಾಮಿ ಅವರು ನಿರ್ದೇಶಕ, ನಿರ್ಮಾಪಕ, ಸೆನ್ಸಾರ್ ಬೋರ್ಡ್, ಫಿಲಂ ಚೇಂಬರ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅರ್ಜಿ ವಿಚಾರಣೆಯನ್ನು ಶನಿವಾರ ನಡೆಸಿದ ಕೋರ್ಟ್ ಅಂಜನಿಪುತ್ರ ಸಿನಿಮಾ ಪ್ರದರ್ಶನ ಮಾಡದಂತೆ ಆದೇಶಿಸಿ ಜ. 2ಕ್ಕೆ ವಿಚಾರಣೆ ಮುಂದೂಡಿದೆ.

“ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಅಂಜನಿಪುತ್ರ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗುರುವಾರ ರಿಲೀಸ್ ಆಗಿದ್ದ ಅಂಜನಿಪುತ್ರನಿಗೆ ಅಭಿಮಾನಿಯಿಂದ ಶಾಕ್!

ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದ್ದು ಗುರುವಾರ ಬಿಡುಗಡೆಯಾಗಿತ್ತು. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.