Connect with us

Bengaluru City

ಸತ್ಯ ಹೇಳಿದ್ದೆ ತಪ್ಪಾಯ್ತು – ಕೆಲ್ಸದಿಂದ ಕೊರೊನಾ ವಾರಿಯರ್ ಔಟ್

Published

on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕಂಟ್ರೋಲ್ ರೂಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದ ಮಹಿಳಾ ಕೊರೊನಾ ವಾರಿಯರ್ ಒಬ್ಬರನ್ನು ಬಿಬಿಎಂಪಿ ಕೆಲಸದಿಂದ ಅಮಾನತು ಮಾಡಿದೆ.

ಕೊರೊನಾ ಕಂಟ್ರೋಲ್ ರೂಂ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಯ ಮಹಿಳಾ ಅಧಿಕಾರಿಯೊಬ್ಬರು, ಕೊರೊನಾ ರೋಗಿಗಳು ಕೈಕಾಲು ಹಿಡಿಯುತ್ತೇವೆ ಬೆಡ್ ವ್ಯವಸ್ಥೆ ಮಾಡಿ. ಒಂದು ಬೆಡ್ ಬ್ಲಾಕ್ ಮಾಡಿ ಅಂತಾರೆ. ಆದರೆ ಕಂಟ್ರೋಲ್ ರೂಂ ನಲ್ಲಿರುವ ನನಗೆ ಬೆಡ್ ಬ್ಲಾಕ್ ಮಾಡೋದಕ್ಕೆ ಅವಕಾಶ ಕೊಡಲ್ಲ. ಸೆಂಟ್ರಲ್ ವಾರ್ ರೂಂ ಟೀಮ್‍ಗೆ ರಿಪೋರ್ಟ್ ಮಾಡಿದರೆ ಅಲ್ಲಿ ಅವರು ರೋಗಿಗಳಿಗೆ ಸ್ಪಂದಿಸುವುದೇ ಇಲ್ಲ. ನಮಗೆ ಮತ್ತೆ ವಾಪಸ್ ರೋಗಿಗಳು ಕರೆ ಮಾಡಿ ಅಳಲು ತೋಡಿಕೊಳುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಜೊತೆಗೆ ನಾಲ್ಕು ಅಂಬುಲೆನ್ಸ್ ನನ್ನ ವಾರ್ಡ್‍ಗೆ ಕೊಟ್ಟಿದ್ದಾರೆ. ಆದರೆ ರೋಗಿಗಳು ತುರ್ತಾಗಿ ಕರೆ ಮಾಡಿ ಅಂಬುಲೆನ್ಸ್ ಬೇಕು ಕಳುಹಿಸಿ ಎಂದು ಕೇಳುತ್ತಾರೆ. ಆಗ ನಾವು ಹಿರಿಯ ಅಧಿಕಾರಿಗಳಿಗೆ ಕೇಳಿದರೆ, ನೀವು ಇಲ್ಲಿರುವ ಅಂಬುಲೆನ್ಸ್ ಕಳಿಸಬೇಡಿ ಅಂತಾರೆ. ಒಂದು ತಿಂಗಳಿಂದ ಹಾಗೆ ಬಿದ್ದಿದೆ. ಹೋಂ ಐಸೊಲೇಷನ್‍ನಲ್ಲಿರುವವರ ಆರೋಗ್ಯ ಏರುಪೇರಾದರೂ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸುವುದಕ್ಕೆ ಅವಕಾಶ ಕೊಡಲ್ಲ ಎಂದು ಮಹಿಳಾ ಅಧಿಕಾರಿ ದೂರಿದ್ದರು.

ವೆಂಟಿಲೇಟರ್ ನಲ್ಲಿರುವ ರೋಗಿಯನ್ನು ಏಳು ದಿನ ಆಯ್ತು ಎಂದು ಡೈರೆಕ್ಟ್ ಡಿಸ್ಚಾರ್ಜ್ ಮಾಡಿದ್ದಾರೆ. ಆಸ್ಪತ್ರೆಯ ವಿರುದ್ಧ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗಿಲ್ಲ. ಜನರಿಗೆ ಸಹಾಯ ಮಾಡೋಕೆ ಆಗಲ್ಲ. ಕೈಕಟ್ಟಿ ಹಾಕುತ್ತಾರೆ ಅಂದರೆ ಯಾಕೆ ಬೇಕು ಈ ವ್ಯವಸ್ಥೆ ಎಂದು ಮಹಿಳಾ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದರು. ಈ ಅಧಿಕಾರಿಯನ್ನು ಈಗ ಬಿಬಿಎಂಪಿ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇಂದರಿಂದ ಭಯಗೊಂಡ ಮಹಿಳಾ ಅಧಿಕಾರಿ ವಿಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದು, ಸತ್ಯ ಹೇಳಿದ್ದೇ ತಪ್ಪಾಗಿದೆ. ನನ್ನನ್ನು ಕೆಲಸದಿಂದ ತೆಗದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸಿ ಮನೆಯ ಹತ್ತಿರ ಪೊಲೀಸ್ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳಾ ಅಧಿಕಾರಿ ಒತ್ತಾಯ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *