Connect with us

Bengaluru City

ಅವಕಾಶಕ್ಕಾಗಿ ಜೆಡಿಎಸ್‍ನವ್ರು RSS ಜೊತೆಯೂ ಸೇರಿಕೊಳ್ಬೋದು: ಸಿದ್ದರಾಮಯ್ಯ

Published

on

– ಕಾಂಗ್ರೆಸ್ ತಾಯಿ ಪಕ್ಷ ಇದ್ದಂತೆ
– ವಿಧಾನಸಭಾ ಎಲೆಕ್ಷನ್‍ನಲ್ಲಿ ನಾವೇ ಗೆಲ್ತೀವಿ

ಬೆಂಗಳೂರು: ಜೆಡಿಎಸ್ ನವರು ಆರ್‍ಎಸ್‍ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಜೆಡಿಎಸ್ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ಪಕ್ಷದ ದೇವೇಗೌಡರು ಹಾಗೂ ಕುಟುಂಬ ಒಂದು ಅವಕಾಶವಾದಿ. ಪಕ್ಷಸ್ವಾರ್ಥ ಇರುವವರು. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಬಿಜೆಪಿ ಜೊತೆಯೂ ಹೋಗುತ್ತಾರೆ. ಆರ್ ಎಸ್ ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ ಎಂದು ಟಾಂಗ್ ನೀಡಿದ್ದಾರೆ.

ಅನೇಕ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷವೇ ಮೂಲ. ಬಿಜೆಪಿ, ಜೆಡಿಎಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಸೇರಿ ಇತರೆ ಪಕ್ಷಗಳಿಗೆ ಕಾಂಗ್ರೆಸ್ ಮೂಲ. ಕಾಂಗ್ರೆಸ್ ಒಂದು ರೀತಿ ತಾಯಿ ಪಕ್ಷ ಇದ್ದಂತೆ. ನಾನು ಆರು ವರ್ಷ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಆಗಿನಿಂದಲೂ ರಮೇಶ್ ಬಾಬು ಕ್ರಿಯಾಶೀಲ ನಾಯಕರಾಗಿದ್ದರು ಎಂದರು.

ಹೆಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ವೀರರ ಪಾಟೀಲ್ ಹೀಗೆ ಎಲ್ಲರೂ ಕಾಂಗ್ರೆಸ್ಸಿನವರೇ ಆಗಿದ್ದಾರೆ. ಕಾಂಗ್ರೆಸ್ ಅಂದ್ರೆ ಒಂದು ಪಕ್ಷ ಅಲ್ಲ, ಚಳುವಳಿ ಇದ್ದಂತೆ. ಬಹಳ ಜನ ನಾಯಕರು ಕಾಂಗ್ರೆಸ್ಸಿನಿಂದಲೇ ಅನ್ಯ ಪಕ್ಷಗಳಿಗೆ ಹೋಗಿದ್ದಾರೆ. ದೇವೇಗೌಡರು ಕಾಂಗ್ರೆಸ್ಸಿನಲ್ಲಿ ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. 1962 ರಲ್ಲಿ ಟಿಕೆಟ್ ಸಿಗದಾಗ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು ಎಂದು ವಿವರಿಸಿದರು.

ಇದೇ ವೇಳೆ ಕೊರೊನಾ ನಿಯಂತ್ರಣ ಸಂಬಂಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕೊರೊನಾ ನಿಯಂತ್ರಣದಲ್ಲೂ ಮೋದಿ ವಿಫಲರಾಗಿದ್ದಾರೆ. ಕೊರೊನಾ ಆರಂಭವಾದಾಗ ದೇಶ 17ನೇ ಸ್ಥಾನದಲ್ಲಿತ್ತು. ಈಗ ಎರಡನೇ ಸ್ಥಾನದಲ್ಲಿದ್ದು, ಮುಂದೆ ಅಮೆರಿಕವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಹೋದರು ಅಚ್ಚರಿಯಿಲ್ಲ. ಇವರಿಗೆ ನಾಚಿಕೆ ಮಾನ ಮಾರ್ಯಾದೆ ಇದ್ದಿದ್ರೆ ಅಧಿಕಾರದಲ್ಲಿ ಇರಬಾರದು. ನಮ್ಮ ಕೈಯಲ್ಲಿ ಅಧಿಕಾರ ನಡೆಸೋಕೆ ಸಾಧ್ಯ ಇಲ್ಲ ಎಂದು ಅಧಿಕಾರ ಬಿಟ್ಟು ಬಿಡಬೇಕಿತ್ತು. ಅವರಿಗೆ ಮಾನ ಮಾರ್ಯಾದೆ ಇಲ್ಲ. ಸುಲಭವಾಗಿ ಅವರು ಅಧಿಕಾರ ಬಿಡಲ್ಲ. ಜನರೇ ಅಧಿಕಾರವನ್ನ ಕಿತ್ತಾಕಬೇಕು ಎಂದು ಗುಡುಗಿದರು.

ಮೋದಿಯವರು ದೀಪಹಚ್ಚಿ, ಚಪ್ಪಾಳೆ ಹೊಡೆಯಿರಿ, ಜಾಗಟೆ ಹೊಡೆಯಿರಿ ಎಂದರು. ಮಹಾಭಾರತ ಯುದ್ಧ 18 ದಿನದಲ್ಲಿ ಮುಗಿಯಿತು. ನಾನು 21 ದಿನದಲ್ಲಿ ಕೊರೊನಾ ಯುದ್ಧ ಗೆಲ್ತೀನಿ ಅಂದ್ರು. ವಿಧಾನಸಭೆ ಚುನಾವಣೆ ಯಾವಾಗ ನಡೆದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಪಕ್ಷ ಒನ್ ವೈಸ್‍ನಲ್ಲಿ ಇರಬೇಕು. ಆಗ ಮಾತ್ರ ಅಧಿಕಾರಕ್ಕೆ ಬರುತ್ತೇವೆ. ಏನೇ ಅಸಮಾಧಾನ ಇದ್ದರೂ ಪಕ್ಷದ ಆಂತರಿಕವಾಗಿ ಚರ್ಚೆ ಮಾಡಬೇಕು. ನಾವು ಅಧಿಕಾರಕ್ಕೆ ಬಂದರು ರಾಜ್ಯದ ಈಗಿನ ಆರ್ಥಿಕ ಸ್ಥಿತಿ ಸರಿ ಮಾಡೋದಕ್ಕೆ ಇನ್ನೂ ಎರಡು ವರ್ಷ ಬೇಕು ಎಂದು ವಾಗ್ದಾಳಿ ನಡೆಸಿದರು.

Click to comment

Leave a Reply

Your email address will not be published. Required fields are marked *