Connect with us

Bengaluru City

ಬೇಲ್ ಪಡೆಯಲ್ಲ, ಸ್ಟೇಷನ್‍ಗೆ ಹೋಗಲ್ಲ – ಕುಸುಮಾ ವಿರುದ್ಧದ ಎಫ್ಐಆರ್‌ಗೆ ಡಿಕೆಶಿ ಕಿಡಿ

Published

on

– ಚುನಾವಣಾ ಆಯೋಗಕ್ಕೆ ದೂರು ನೀಡ್ತೀವಿ

ಬೆಂಗಳೂರು: ನಮ್ಮ ಅಭ್ಯರ್ಥಿ ಹೆಣ್ಣು ಮಗಳ ಮೇಲೆ ಹಾಗೂ ಸಿದ್ದರಾಮಯ್ಯ ಎಸ್ಕಾರ್ಟ್ ಡ್ರೈವರ್ ಮೇಲೆ ಎಫ್‍ಐಆರ್ ಆಗಿದೆ. ಈ ಎಫ್ಐಆರ್‌ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್‍ಗೂ ಹೋಗಲ್ಲ. ಇದಕ್ಕೆ ನಾವು ಹೆದರೋ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಪ್ರಜಾಪ್ರಭುತ್ವದಲ್ಲಿ ಇಷ್ಟು ನೀಚವಾದ ರಾಜಕಾರಣ ನಾನು ಯಾವತ್ತೂ ನೋಡಿಲ್ಲ. ಕಾಂಗ್ರೆಸ್ ಪಕ್ಷದ ವಿದ್ಯಾವಂತ ಹೆಣ್ಣುಮಗಳು ಕಾನೂನು ಅರಿವಿರುವ ಹಾಗೂ ನೊಂದು-ಬೆಂದಿರುವ ಹೆಣ್ಣು ಮಗಳನ್ನ ನಾವು ಅಭ್ಯರ್ಥಿ ಮಾಡಿದ್ದೇವೆ ಎಂದರು.

ನಾವು ಸಮಯ ತೆಗೆದುಕೊಂಡು ನಾಮಪತ್ರ ಸಲ್ಲಿಸಲು ಹೋಗಿದ್ದೆವು. ನಾಮಿನೇಷನ್ ಫೈಲ್ ಮಾಡಿದ್ದೇವೆ. 1,100 ಕೇಸು ಬಿಜೆಪಿ ಕಾರ್ಯಕರ್ತರ ಮೇಲಿದೆ. ಕಾಂಗ್ರೆಸ್ಸಿಗರ ಮೇಲೆ ಸುಮಾರು 400ಕ್ಕೂ ಹೆಚ್ಚು ಕೇಸು ಹಾಕಿದ್ದಾರೆ. 3 ಜನ ಹೆಣ್ಣು ಮಕ್ಕಳು ಕಾರ್ಪೊರೇಟರ್ ಗಳ ಮೇಲೆ ದೌರ್ಜನ್ಯವಾಗಿದೆ. ಆಗ ನಾವು ಅಸಾಹಯಕರಾಗಿ ಇದ್ದೆವು. ಜೆಡಿಎಸ್ ಮೇಲೆ ಆರ್‍ಆರ್ ನಗರದಲ್ಲಿ 200ಕ್ಕೂ ಹೆಚ್ಚು ಕೇಸುಗಳಾಗಿವೆ. ಪೊಲೀಸರನ್ನ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನ ವಶದಲ್ಲಿ ಇಟ್ಟುಕೊಂಡು ಈ ರೀತಿ ಮಾಡಲಾಗಿದೆ ಎಂದು ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ 

ಕೊರೊನಾ ಸಂದರ್ಭದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ವಿರುದ್ಧ ಆನೇಕಲ್ ಸೇರಿದಂತೆ ಮೂರು ಕಡೆ ಕೇಸಾಗಿದೆ. ನಮ್ಮ ಅಭ್ಯರ್ಥಿ ಹೆಣ್ಣು ಮಗಳ ಮೇಲೆ ಹಾಗೂ ಸಿದ್ದರಾಮಯ್ಯ ಎಸ್ಕಾರ್ಟ್ ಡ್ರೈವರ್ ಮೇಲೆ ಎಫ್‍ಐಆರ್ ಆಗಿದೆ. ಸಿದ್ದರಾಮಯ್ಯ ಮೇಲೆ ಎಫ್‍ಐಆರ್ ಹಾಕ್ರಿ. ಅಲ್ಲಿದ್ದ ಪೊಲೀಸರ ಮೇಲೆ ಹಾಕ್ರಿ, ಆ ಅಭ್ಯರ್ಥಿ ಹೆಣ್ಣುಮಗಳ ಮೇಲೆ ಕೇಸು ಹಾಕಿ ಹೆದರಿಸಲು ಹೊರಟಿದ್ದಾರೆ. ಸರ್ಕಾರ ಇದಕ್ಕೆ ಕುಮ್ಮಕ್ಕಾಗಿ ನಿಂತಿದೆ. ನಾಮಪತ್ರ ಹಾಕಲು ಬಂದ ಅಭ್ಯರ್ಥಿ ಮೇಲೆ ಕೇಸು ಹಾಕುವಂತ ಸಣ್ಣ ಹಾಗೂ ನೀಚತನದ ರಾಜಕಾರಣ ಇನ್ನೊಂದಿಲ್ಲ. ಇದಕ್ಕೆ ಪೊಲೀಸರು ಹಾಗೂ ಸರ್ಕಾರವೇ ನೇರ ಕಾರಣ ಎಂದು ದೂರಿದರು.

ಈ ಎಫ್‍ಐಆರ್‍ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್ ಗೆ ಕೂಡ ಹೋಗಲ್ಲ. ಇದಕ್ಕೆ ಹೆದರೋದು ಇಲ್ಲ. ನೂರು ಮೀಟರ್ ಒಳಗೆ ಶಾಸಕರು ಸಚಿವರು ಇದ್ದರಲ್ಲ ಅವರ ಮೇಲೆ ಯಾಕೆ ಕೇಸು ಹಾಕಿಲ್ಲ?. ಬಿಜೆಪಿಯವರು ಜನತಾ ದಳದವರು ಯಾರು ಬರಲಿಲ್ವ? ಅವರ ಮೇಲೆ ಯಾಕೆ ಎಫ್‍ಐಆರ್ ಹಾಕಲಿಲ್ಲ?. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಹೆಣ್ಣು ಮಗಳ ಮೇಲಿನ ಶೋಷಣೆಯನ್ನು ಎದುರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಎಫ್‍ಐಆರ್ ಹಾಕಿದ ಇನ್ಸ್ ಪೆಕ್ಟರನ್ನ ವರ್ಗಾವಣೆ ಮಾಡಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆ ಅಭ್ಯರ್ಥಿಯನ್ನ ನಾವೇ ಬೆಳೆಸಿದ್ದು. ನಾವು ಬೆಳೆಸಿ ತಪ್ಪು ಮಾಡಿದ್ದೇವೆ ಎಂದು ಕಿಡಿಕಾರಿದರು.

Click to comment

Leave a Reply

Your email address will not be published. Required fields are marked *