Tuesday, 18th February 2020

ಬಿಎಸ್‍ವೈ ಕೊಟ್ಟ ಮಾತು ಉಳಿಸಿಕೊಳ್ತಾರೆ, ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗುತ್ತೆ: ಬಿಸಿ ಪಾಟೀಲ್

ಬೆಂಗಳೂರು: ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಯಾವತ್ತೂ ತಪ್ಪಿಲ್ಲ. ಅವರು ಕೊಟ್ಟ ಮಾತಿನಂತೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡೋ ವಿಶ್ವಾಸ ಇದೆ ಎಂದು ಬಿಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆಗದೇ ಇರೋದಕ್ಕೆ ನಮಗೂ ಬೇಸರ ಆಗಿದೆ. ರಾಜ್ಯದ ಜನರಿಗೂ ಬೇಸರ ಆಗಿದೆ. ಆದಷ್ಟು ಬೇಗ ವಿಸ್ತರಣೆ ಆಗೋ ವಿಶ್ವಾಸ ಇದೆ ಅಂತ ತಿಳಿಸಿದರು.

ಸಿಎಂ ಯಡಿಯೂರಪ್ಪನವರು 17 ಜನರಿಗೂ ಸ್ಥಾನ ನಿಡುವ ಭರವಸೆ ಕೊಟ್ಟಿದ್ದಾರೆ. ಅವರು ವಿದೇಶದಿಂದ ಬಂದು ನಂತರ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತಾಡಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡುತ್ತಾರೆ. ಕೇವಲ 16- 17 ಜನ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ. ಆಡಳಿತ ಚುರುಕು ಮಾಡಬೇಕಿದೆ. ಹೀಗಾಗಿ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಅಂತ ಅಸಮಾಧಾನ ಹೊರ ಹಾಕಿದರು. ಅಮಿತ್ ಶಾ ಅವರ ಜೊತೆ ನೇರವಾಗಿ ಚರ್ಚೆ ಮಾಡೋಕೆ ಆಗಲ್ಲ. ಅದಕ್ಕೆ ಹಂತ ಇರುತ್ತೆ. ರಾಜ್ಯ ಬಿಜೆಪಿ ಅಧ್ಯಕ್ಷರು, ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡುತ್ತಾರೆ. ಹೊಸದಾಗಿ ಜೆಪಿ ನಡ್ಡಾ ಅವರು ಅಧ್ಯಕ್ಷರಾದ ಹಿನ್ನೆಲೆ ಎಲ್ಲಾ ಮಾಹಿತಿಗಳು ಅವರಿಗಿದೆ. ಯಡಿಯೂರಪ್ಪರವರು ವಿದೇಶದಿಂದ ಬಂದ ಬಳಿ ಅಧ್ಯಕ್ಷರ ಜೊತೆ ಮಾತಾಡ್ತಾರೆ ಅಂದ್ರು.

ಇದೇ ವೇಳೆ ಬಾಂಬ್ ಪ್ರಕರಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿರುದ್ಧ ಕಿಡಿಕಾರಿದ ಬಿಸಿ ಪಾಟೀಲ್, ಕುಮಾರಸ್ವಾಮಿ ಅವರ ಹೇಳಿಕೆ ಬಹಳ ಬಾಲಿಶವಾದದ್ದು. ಒಂದು ಬಾಂಬ್ ಘಟನೆಯನ್ನ ಅಣಕು ಅಂತ ಹೇಳಿದ್ದಾರೆ. ಒಂದು ವೇಳೆ ಬಾಂಬ್ ಬ್ಲಾಸ್ಟ್ ಆಗಿದ್ರೆ ಇವ್ರೇ ಪೊಲೀಸ್ ವೈಫಲ್ಯ, ಸರ್ಕಾರದ ವೈಫಲ್ಯ ಅಂತಿದ್ದರು. ಹೀಗೆ ಮಾತಾಡೋದ್ರಿಂದ ಪೊಲೀಸರ ನೈತಿಕತೆಗೆ ಪೆಟ್ಟು ಬಿದ್ದಂತೆ ಆಗುತ್ತೆ. ಮಾಜಿ ಪ್ರಧಾನಿಗಳ ಮಗ ಹೀಗೆ ಮಾತಾಡಿ ಕಾಮಿಡಿ ವ್ಯಕ್ತಿ ಆಗೋದು ಬೇಡ ಅಂತ ಹೆಚ್‍ಡಿಕೆ ವಿರುದ್ಧ ಲೇವಡಿ ಮಾಡಿದ್ರು.

Leave a Reply

Your email address will not be published. Required fields are marked *