Bengaluru Rural
ಬೇಗೂರಿನಲ್ಲಿ ಚಿರತೆ ಭಯ – ಸಿಸಿಟಿವಿ, ಡ್ರೋಣ್ ಬಳಸಿ 6 ದಿನಗಳಿಂದ ಹುಡುಕಾಟ

ಆನೇಕಲ್: ಬೇಗೂರು ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಬಳಿ ಚಿರತೆ ಪ್ರತ್ಯಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ. ಅಪಾರ್ಟ್ ಮೆಂಟ್ ಸುತ್ತಮುತ್ತಲಿನ ಏರಿಯಾಗಳಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ನಿನ್ನೆ ಡ್ರೋನ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಮಾಡಿದ್ದರು. ಡ್ರೋನ್ ಕ್ಯಾಮ್ ನಿಂದ ಐಡೆಂಟಿಫಿಕೇಷನ್ ಕಷ್ಟ ಅನ್ನೋ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸಿಬ್ಬಂದಿ ಚಿರತೆ ಸೆರೆಹಿಡಿಯಲು ಬೋನ್ ಗಳನ್ನು ನಿರ್ಮಿಸಿದ್ದಾರೆ. ನಾಲ್ಕು ದಿನಗಳಿಂದ ಸಿಸಿಟಿವಿಗೂ ಕಾಣಿಸಿಕೊಂಡಿಲ್ಲ, ಬೋನ್ ಗಳ ಕಡೆ ಕೂಡ ಬಂದಿಲ್ಲ. ಹೀಗಾಗಿ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಬೋನ್ ಗಳನ್ನು ತೆರವು ಮಾಡುವ ಸಾಧ್ಯತೆ ಇದೆ.
ಸತತ ಆರನೇ ದಿನವೂ ಚಿರತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸೋಮವಾರ ಮುಂಜಾನೆ ಕಾಣಿಸಿಕೊಂಡಿದ್ದ ಚಿರತೆ ಇಲ್ಲಿವರೆಗೂ ನಾಪತ್ತೆಯಾಗಿದೆ. ಅರಣ್ಯ ಇಲಾಖೆಯಿಂದ ಸತತ ಮೂರನೇ ದಿನವೂ ಬೋನ್ ಇಟ್ಟು ಸಿಬ್ಬಂದಿ ಕಾಯುತ್ತಿದ್ದಾರೆ. ಬೋನ್ ಒಳಗಡೆ ಮೇಕೆ ಮರಿಯನ್ನು ಇಡಲಾಗಿದ್ದು ಚಿರತೆಗಾಗಿ ಕಾದುಕುಳಿತಿದ್ದಾರೆ. ನಿನ್ನೆ ರಾತ್ರಿ ಪೂರ್ತಿ ಐದು ಮಂದಿ ಅರಣ್ಯ ಸಿಬ್ಬಂದಿಯಿಂದ ಚಿರತೆಗಾಗಿ ಹುಡುಕಾಟ ನಡೆಯಿತು.
ಚಿರತೆ ರಾತ್ರಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದರಿಂದ ಹತ್ತಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು ಹಾಕಲಾಗಿದೆ. ಚಿರತೆ ಚಲನವಲನಗಳ ಬಗ್ಗೆ ನಿಗಾ ಇಡಲು ತಜ್ಞರು ಸೂಚನೆ ನೀಡಿದ್ದಾರೆ. ಡ್ರೋನ್ ಕ್ಯಾಮೆರಾ ಮೂಲಕ ಚಿರತೆ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಲ್ಲು ಕ್ವಾರಿಯಲ್ಲಿ ಚಿರತೆ ಅಡಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಬಿಟಿಎಂ ಬಡಾವಣೆಯ ಜನ ಯಾರು ಸಹ ಸಂಜೆ ಮತ್ತು ಬೆಳಗ್ಗಿನ ಜಾವ ಹೊರಗಡೆ ಬರಬಾರದು ಅಂತ ಅರಣ್ಯ ಇಲಾಖೆ ಸೂಚನೆ ನೀಡಿದೆ.
