Tuesday, 21st January 2020

Recent News

ಸಂಸತ್ತಿನಲ್ಲಿ ಮಾತನಾಡಲು ನಿಂತ್ರೆ ಜ್ಞಾನಾರ್ಜನೆ ಆಗ್ತಿತ್ತು – ಡಿವಿಎಸ್ ಸಂತಾಪ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಯಪೇಯಿ ರೀತಿಯ ಅಜಾತಶತ್ರುವನ್ನು ನಾವು ಕಳೆದುಕೊಂಡವು. ಸಂಸತ್ತಿನಲ್ಲಿ ಭಾಷಣ ಮಾಡಲು ನಿಂತರೆ ಜ್ಞಾನಾರ್ಜನೆ ಆಗುತಿತ್ತು ಎಂದು ಹೇಳುವ ಮೂಲಕ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಕೇಂದ್ರ ಸಚಿವ ಸದಾನಂದ ಗೌಡ ಸಂತಾಪ ಸೂಚಿಸಿದ್ದಾರೆ.

ಬಹುದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಅವರು ಇಂದು ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇದು ಅತ್ಯಂತ ದುಖಃದ ದಿನ, ಅರುಣ್ ಜೇಟ್ಲಿ ಅವರು ನನ್ನ ರಾಜಕೀಯ ಜೀವನದ ಅವಿಭಾಜ್ಯ ಅಂಗವಾಗಿದ್ದರು ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಮೊದಲ ಬಾರಿಗೆ ಕಾನೂನು ಮಂತ್ರಿಯಾಗಿದ್ದಾಗ ನನಗೆ ಕಾನೂನಿನ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಅ ಸಮಯದಲ್ಲಿ ಅವರು ನನಗೆ ಧೈರ್ಯ ಹೇಳಿ ನಿಮಗೆ ಯಾವುದೇ ಸಮಯದಲ್ಲೂ ಬೇಕಾದ ಸಲಹೆ ನೀಡುತ್ತೇನೆ ಎಂದು ಆತ್ಮವಿಶ್ವಾಸ ತುಂಬಿದ್ದರು. ತುಂಬ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ಜೇಟ್ಲಿ ಅವರು ಕಲಾಪದಲ್ಲಿ ಮಾತನಾಡುತ್ತಿದ್ದರೆ ವಿರೋಧ ಪಕ್ಷದವರು ಕೂಡ ಚಕಾರ ಎತ್ತುತ್ತಿರಲಿಲ್ಲ. ವಾಯಪೇಯಿ ರೀತಿಯಲ್ಲಿ ಅರುಣ್ ಜೇಟ್ಲಿ ಕೂಡ ಆಜಾತಶತ್ರು ಆಗಿದ್ದರು ಎಂದು ನೆನಪನ್ನು ಹಂಚಿಕೊಂಡರು.

ಅರುಣ್ ಜೇಟ್ಲಿ ಅವರು, ಸಣ್ಣ ಪದಗಳಿಂದ ದೊಡ್ಡ ವಿಚಾರವನ್ನು ಜನರಿಗೆ ಹೇಳುತ್ತಿದ್ದ ಒಳ್ಳೆಯ ವಕೀಲರು. ನಾನು ನೋಡಿದ್ದಂತೆ ಸುಪ್ರೀಂ ಕೋರ್ಟಿನಲ್ಲಿ ಇದ್ದ ಪ್ರಮಾಣಿಕ ದಕ್ಷ ವಕೀಲ ಅರುಣ್ ಜೇಟ್ಲಿ ಅವರ ಸಾವು ದೇಶಕ್ಕೆ ಬರಿಸಲಾಗದ ನಷ್ಟವಾಗಿದೆ. ನಾನು ರಾಜ್ಯದ ಅಧ್ಯಕ್ಷನಾಗಿದ್ದಾಗ ಅವರು ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿದ್ದರು. ಅ ಸಮಯದಲ್ಲಿ ಅರುಣ್ ಜೇಟ್ಲಿ ಅವರು ಮಾರ್ಗದರ್ಶನದಂತೆ ನಡೆದು ಯಡಿಯೂರಪ್ಪ ಅವರು ಸರ್ಕಾರ ರಚನೆ ಮಾಡಿದರು ಎಂದು ಹೇಳಿದ್ದಾರೆ.

ಅರುಣ್ ಜೇಟ್ಲಿಯವರು ಇನ್ನಿಲ್ಲ ಅನ್ನೋದನ್ನೇ ಊಹಿಸಲಾಗುತ್ತಿಲ್ಲ. ಅವರ ಅಗಲಿಕೆ ವೈಯುಕ್ತಿಕವಾಗಿ ನನಗೆ ದೊಡ್ಡ ಆಘಾತ ತಂದಿದೆ. ಅತ್ಯುತ್ತಮ ಆಡಳಿತಗಾರ, ನೇರ ನಿರ್ಭೀತ ನುಡಿಗಾರ, ನನ್ನ ರಾಜಕೀಯ ಜೀವನದ ಪ್ರತಿ ಹಂತದಲ್ಲಿ ಅವರ ಮಾರ್ಗದರ್ಶನ ಇತ್ತು, ಕರ್ನಾಟಕದ ಜನರ ಮೇಲೆ ವಿಶೇಷ ಅಕ್ಕರೆ ಇಟ್ಟುಕ್ಕೊಂಡಿದ್ದ ಅವರು ಭೇಟಿಯಾದಾಗೆಲ್ಲ ನಿಮ್ಮಲ್ಲಿಯ ಜನರ ಪ್ರೀತಿ ಎಲ್ಲೂ ಸಿಗಲ್ಲ ಎನ್ನುತ್ತಿದ್ದರು. ಪಕ್ಷ ದೇಶ ಎಂದರೆ ಎಲ್ಲವನ್ನು ಮರೆಯುತ್ತಿದ್ದ ಮಾನ್ಯರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಿದ್ದರು. ಸಂಸತ್ ನಲ್ಲಿ ಜೇಟ್ಲಿಯವರು ಮಾತನಾಡಲು ನಿಂತರೆಂದರೆ ಎಲ್ಲರ ಕಿವಿ ನೆಟ್ಟಗಾಗುತ್ತಿದ್ದವು. ಅಲ್ಲಿ ಜ್ಞಾನಾರ್ಜನೆ ಇರುತ್ತಿತ್ತು ಅವರಿಗೆ ಸದ್ಗತಿ ದೊರೆಯಲಿ ಎಂದು ಡಿವಿಎಸ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *