Sunday, 22nd September 2019

ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಚಾಲಕ

ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.

ಜೆಪಿ ನಗರದ ಕೊತ್ತನೂರು ದಿಣ್ಣೆ ನಿವಾಸಿ ರಾಜೇಂದ್ರ .ಕೆ ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಹಲವರಿಗೆ ಗಂಭೀರ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿ ರಾಜೇಂದ್ರ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನಿಲ್ಲಿಸಿದ್ದ ಬೈಕ್‍ಗಳಿಗೆ ಡಿಕ್ಕಿ ಹೊಡೆದು ಫುಟ್‍ಪಾತ್ ಮೇಲೆ ಕಾರನ್ನು ಹತ್ತಿಸಿದ್ದಾನೆ. ಪರಿಣಾಮ ಫುಟ್‍ಪಾತ್ ಅಂಗಡಿಯ ಮುಂದೆ ನಿಂತಿದ್ದ ಹಾಗೂ ನಡೆದುಕೊಂಡು ಹೋಗುತ್ತಿದ್ದ ಒಟ್ಟು 8 ಜನರಿಗೆ ಡಿಕ್ಕಿಹೊಡೆದಿದ್ದಾನೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯನ್ನು ನೋಡಿ ಕೆಲವರು ತಕ್ಷಣವೇ ಕಾರಿನ ಬಳಿಗೆ ಬಂದು ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಚಾಲಕನನ್ನು ಥಳಿಸಿ, ನಮಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಆರೋಪಿ ಚಾಕಲ ರಾಜೇಂದ್ರನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ಖಚಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಾಲಕ ರಾಜೇಂದ್ರನನ್ನು ಬಂಧಿಸಿರುವ ಪೊಲೀಸರು ವಿಚಾರಗೆ ಒಳಪಡಿಸಿದ್ದಾರೆ.

Leave a Reply

Your email address will not be published. Required fields are marked *