Connect with us

Districts

ನಾಟಕಕಾರ, ಸಾಹಿತಿ ಬೇಲೂರು ಕೃಷ್ಣಮೂರ್ತಿ ನಿಧನ- ಕಂಬನಿ ಮಿಡಿದ ಕನ್ನಡ ಸಾಹಿತ್ಯ ಪರಿಷತ್ತು

Published

on

ಹಾಸನ: ಹಿರಿಯ ನಾಟಕಕಾರ, ಸಾಹಿತಿಗಳು ಹಾಗೂ ಭಾರತ ಸೇವಾದಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಬೇಲೂರು ಕೃಷ್ಣಮೂರ್ತಿರವರ ಅನಾರೋಗ್ಯದಿಂದ ನಿಧನರಾಗಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಂಬನಿ ಮಿಡಿದು ಶ್ರದ್ಧಾಂಜಲಿ ಅರ್ಪಿಸಿತು. ಸಂಜೆ ವೇಳೆಗೆ ಮೃತ ದೇಹವನ್ನು ಹಾಸನದಲ್ಲಿರುವ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿಗೆ ದಾನವಾಗಿ ನೀಡಲಾಯಿತು.

ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕೃಷ್ಣಮೂರ್ತಿಯವರು ಉಡುಪಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರದಲ್ಲಿ ಹಾಸನದಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಸುಮಾರು 10:45ಕ್ಕೆ ಕೊನೆ ಉಸಿರೆಳೆದರು. ಅಂತಿಮ ದರ್ಶನ ಮಾಡಲು ಅವರ ಪ್ರಾರ್ಥಿವ ಶರೀರವನ್ನು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಬೇಲೂರು ಕೃಷ್ಣಮೂರ್ತಿರವರು ನಾಟಕಕಾರರು, ಹಿರಿಯ ಸಾಹಿತಿಗಳು ಹಾಗೂ ಭಾರತ ಸೇವಾದಳ ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರು ಮತ್ತು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು ಸಹ ಆಗಿದ್ದರು. ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಿದ್ದ ಅವರು, ನೂರು ನಾಟಕಗಳನ್ನು ಬರೆದು ಇದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನೂರು ಕೃತಿಗಳ ಸರದಾರ ಎಂಬ ಬಿರುದು ಪಡೆದು, ಸನ್ಮಾನಿತರಾಗಿದ್ದರು.

ಭಾರತ ಸೇವಾದಳದ ಹಿರಿಯ ಕಾರ್ಯಕರ್ತರು ಆದಂತಹ ಇವರು ಸೇವಾದಳದ ಅತ್ಯುನ್ನತ ತರಬೇತಿಯಾದ ಕೇಂದ್ರ ನಾಯಕ ತರಬೇತಿ ಪಡೆದು, ಜಿಲ್ಲಾ ಸಂಘಟಕರಾಗಿ ಸೇವೆ ಸಲ್ಲಿಸಿರುತ್ತಾರೆ. ಶಾಲೆಯಲ್ಲಿ ಸೇವಾದಳವನ್ನು ಬೆಳೆಸಿದ್ದಾರೆ. ಡಾ|| ನಾ.ಸು. ಹರ್ಡೀಕರ್ ರವರ ಜೀವನ ಚರಿತ್ರೆಯನ್ನು ಕುರಿತು ಹಲವಾರು ಪುಸ್ತಕಗಳನ್ನು ಬರೆದವರು ಹಾಗೂ ಹರ್ಡಿಕರ್ ರವರ ಒಡನಾಡಿಗಳು ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಒಡನಾಡಿಗಳಾದ ಐ.ಎನ್.ಎ. ರಾಮ್ ರಾವ್ ರವರ ಪಟ್ಟ ಶಿಷ್ಯಂದರು ಸಹ ಆಗಿದ್ದರು.

ಸೇವಾದಳದ ಕಾರ್ಯಕ್ರಮದಲ್ಲಿ ಮತ್ತು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು. ಸೇವಾದಳದ ಸ್ವಯಂ ಸೇವಕರು ಆಗಿದ್ದಂತಹ ಇವರು ಬೇಲೂರಿನಲ್ಲಿರುವ ಡಾ|| ನಾ.ಸು. ಹರ್ಡೀಕರ್ ರವರ ಪ್ರತಿಮೆಯ ಸ್ಥಾಪನೆಗೆ ಕಾರಣಕರ್ತರು ಸಹ ಆಗಿದ್ದರು. ಇವರನ್ನು ಕಳೆದುಕೊಂಡಂತಹ ಇವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡುವುದರೊಂದಿಗೆ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಹಾರೈಸಲಾಯಿತು.

ಅವರ ಆಸೆಯಂತೆ ಸ್ವಗ್ರಹಕ್ಕೆ ಹೋಗಿ ನಂತರ ಸಂಜೆ ವೇಳೆಗೆ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿಗೆ ಕೃಷ್ಣಮೂರ್ತಿಯ ಮೃತ ದೇಹವನ್ನು ದಾನ ಮಾಡಲಾಗುವುದು ಎಂದು ಮೃತರ ಸೊಸೆ ನಾಗಲಕ್ಷ್ಮಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

Click to comment

Leave a Reply

Your email address will not be published. Required fields are marked *