Sunday, 22nd September 2019

ನೆರೆ ಪೀಡಿತರ ನೆರವಿಗೆ ನಿಂತ ರೈಲ್ವೇ ಪೊಲೀಸರು

ಚಿಕ್ಕೋಡಿ (ಬೆಳಗಾವಿ): ಮಹಾ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ರೈಲ್ವೇ ಪೊಲೀಸರ ಮನ ಮಿಡಿದಿದೆ.

ರೈಲ್ವೇ ಪೊಲೀಸರು ಬೆಂಗಳೂರಿನ ಕೇಂದ್ರ ಕಚೇರಿಯಿಂದ ಹಣ ಸಂಗ್ರಹಿಸಿ, ಅದರಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಅಕ್ಕಿ, ಬ್ಲಾಂಕೆಟ್, ಬೇಳೆ ಕಾಳುಗಳು ಸೇರಿದಂತೆ ದಿನನಿತ್ಯದ ಉಪಯುಕ್ತ ವಸ್ತುಗಳನ್ನು ತಲುಪಿಸಿದ್ದಾರೆ.

ಸಂತ್ರಸ್ತರ ನೆರವಿಗೆ ಧಾವಿಸಿದ ರೈಲ್ವೇ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಉಪವಿಭಾಗದಲ್ಲಿ ಒಟ್ಟು 81 ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. 2,00,786 ಜನಸಂಖ್ಯೆ ಹೊಂದಿರುವ ಒಟ್ಟು 46,506 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಒಟ್ಟು 150 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ 97,007 ಜನರು ಆಶ್ರಯ ಪಡೆಯುತ್ತಿದ್ದಾರೆ. 28,109 ಜಾನುವಾರುಗಳನ್ನು ರಕ್ಷಣೆ ಮಾಡಿ, ಪರಿಹಾರ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.

ಚಿಕ್ಕೋಡಿ ಉಪವಿಭಾಗದಲ್ಲಿ ಹರಿಯುವ ನದಿಗಳ ಪ್ರವಾಹ ತಗ್ಗಿದ್ದು, ನಿರಾಶ್ರಿತರು ಮನೆಗಳಿಗೆ ತೆರಳುತ್ತಿದ್ದಾರೆ. ರಾಜ್ಯ ಸರ್ಕಾರವು ಈಗಾಗಲೇ 3,800 ಚೆಕ್‍ಗಳನ್ನು ನೀಡಿದೆ. ಅವುಗಳ ಮೂಲಕ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನ ನೀಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

Leave a Reply

Your email address will not be published. Required fields are marked *