Connect with us

Belgaum

ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಮಾಜಿ ಶಾಸಕರಿದ್ದ ಕಾರ್- ಸವಾರ ಸಾವು

Published

on

ಚಿಕ್ಕೋಡಿ(ಬೆಳಗಾವಿ): ಮಾಜಿ ಶಾಸಕರ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದ ಬಳಿ ನಡೆದಿದೆ.

ರಾಮು ನಾಯಕ್ (50) ಮೃತ ಸವಾರ. ಬೈಕ್‍ನಲ್ಲಿದ್ದ ರಾಮು ಪತ್ನಿ ಪ್ರಭಾವತಿ ನಾಯಕ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಖಾನಾಪುರದ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ.

ಖಾನಾಪುರದ ಎಂಇಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ ಅವರಿಗೆ ಸೇರಿದ ಕೆಎ 22, ಝೆಡ್ 2888 ಸಂಖ್ಯೆಯ ಇನ್ನೋವಾ ಕಾರು ಇಂದು ಚಿಕ್ಕೋಡಿ ಮಾರ್ಗವಾಗಿ ರಾಯಬಾಗಕ್ಕೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಬಳಿಕ ಸವಾರ ರಾಮು ಕಾಲುಗಳ ಮೇಲೆ ಹರಿದಿದೆ. ಹೀಗಾಗಿ ರಾಮು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‍ನ ಹಿಂಬದಿಯಲ್ಲಿ ಕುಳಿತಿದ್ದ ಪ್ರಭಾವತಿ ಬೈಕ್‍ನಿಂದ ಹಾರಿ ನೆಲಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ವೇಗವಾಗಿದ್ದ ಕಾರು ಕೂಡ ಪಲ್ಟಿ ಹೊಡೆದು ಬಿದ್ದಿದೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಅರವಿಂದ್ ಪಾಟೀಲ್ ದಂಪತಿ ಕಾರಿನಲ್ಲಿ ರಾಯಬಾಗ ಪಟ್ಟಣಕ್ಕೆ ತೆರಳುತ್ತಿದ್ದರು. ಅಪಘಾತದಲ್ಲಿ ಸವಾರ ಸ್ಥಳದಲ್ಲಿಯೇ ಅಸು ನೀಗಿದರೂ ಮಾಜಿ ಶಾಸಕ ಅರವಿಂದ ಪಾಟೀಲ್ ಬೇರೊಂದು ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಣ್ಣ ಪುಟ್ಟ ಗಾಯಗಳಿಂದ ಅರವಿಂದ್ ಪಾಟೀಲ್ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಸಕರ ಗುರುತಿನ ಪತ್ರ ಅಪಘಾತದ ಸಂಭವಿಸಿದ ಸ್ಥಳದಲ್ಲಿ ಸಿಕ್ಕಿದೆ. ಹೀಗಾಗಿ ಶಾಸಕರು ಘಟನಾ ಸ್ಥಳದಲ್ಲೇ ಇದ್ದರು ಎನ್ನಲಾಗುತ್ತಿದೆ. ಆದರೆ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ.