Tuesday, 16th July 2019

ಬಿಎಸ್‍ವೈ ಪುತ್ರನಿಗೆ ಯಾವ ಡಿಎನ್‍ಎ ನೋಡಿ ಟಿಕೆಟ್ ಕೊಟ್ರು: ದಿನೇಶ್ ಗುಂಡೂರಾವ್ ಪ್ರಶ್ನೆ

– ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿ ಇಲ್ಲ
– ಬಿಜೆಪಿಯವರು ಸತ್ಯಹರಿಶ್ಚಂದ್ರರೇ?

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರಿಗೆ ಯಾವ ಡಿಎನ್‍ಎ ನೋಡಿ ಶಿವಮೊಗ್ಗದಲ್ಲಿ ಟಿಕೆಟ್ ನೀಡಿದ್ದಾರೆ? ಹಾವೇರಿಯಲ್ಲಿ ಯಾರ ಜೀನ್ಸ್ ನೋಡಿ ಶಿವಕುಮಾರ್ ಉದಾಶಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ? ಇದಕ್ಕೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಉತ್ತರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಬಿ.ಎಲ್.ಸಂತೋಷ್ ಡಿಎನ್‍ಎ ಹಾಗೂ ಜೀನ್ಸ್ ಹೇಳಿಕೆ ನೀಡಬಾರದಿತ್ತು ಎಂದರು.

ಐಟಿ ದಾಳಿ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೋಲುವ ಭೀತಿಯಿಂದಾಗಿ ಆದಾಯ ತೆರಿಗೆ ಇಲಾಖೆ ರೇಡ್ ಗಳನ್ನು ಮಾಡಿಸುತ್ತಿದ್ದಾರೆ. ದೇಶದಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಳು ನಡೆಯುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಬಿಜೆಪಿಯವರು ಸತ್ಯಹರಿಶ್ಚಂದ್ರರೇ? ಅವರ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ. ಅವರು ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಕಾರ್ಯಕರ್ತರು ಹಾಗೂ ಆಪ್ತರ ಮನೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಈ ರೀತಿಯ ಬೆಳವಣಿಗೆ ಯಾವತ್ತೂ ನಡೆದಿರಲಿಲ್ಲ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಅವರು ಕೂಡ ಯಾವುದೇ ಕ್ರಮಕೈಗೊಂಡಿಲ್ಲ. ಐಟಿ ದಾಳಿಯಿಂದಾಗಿ ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ ಎಂದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನಮ್ಮ ಸಂಪರ್ಕದಲ್ಲಿ ಇಲ್ಲ. ಹೀಗಾಗಿ ಅವರು ಪ್ರಚಾರ ಮಾಡುತ್ತಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಯಾರು ಏನು ಮಾಡುತ್ತಿದ್ದಾರೆ ಎಲ್ಲವೂ ನನ್ನ ಗಮಕ್ಕೆ ಬಂದಿದೆ. ಚುನಾವಣೆಯ ಬಳಿಕ ಈ ಕುರಿತು ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದರು.

Leave a Reply

Your email address will not be published. Required fields are marked *