Friday, 17th August 2018

Recent News

ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದ ಬೆಳಗಾವಿ ರೈತರು

ಬೆಳಗಾವಿ: ದುಪ್ಪಟ್ಟು ದರ ನೀಡಿ ಹಾಲು ಖರೀದಿಸುತ್ತಿದ್ದ ಮಹಾರಾಷ್ಟ್ರದ ಗೋಕುಲ ಡೈರಿಯು ಏಕಾಏಕಿ ಹಾಲು ಖರೀದಿಯನ್ನು ನಿಲ್ಲಿಸಿದ್ದಕ್ಕೆ ರೊಚ್ಚಿಗೆದ್ದ ರೈತರು ಹಾಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ಗೋಕುಲ ಡೈರಿಯು ಕಳೆದ 8 ವರ್ಷಗಳಿಂದ ಹಾಲು ಖರೀದಿ ಮಾಡುತ್ತಿದ್ದು, ಪ್ರತಿ ಲೀಟರ್‍ಗೆ ಕರ್ನಾಟಕ್ಕಿಂತ ಹೆಚ್ಚಿನ ದರ ನೀಡುತ್ತಿದ್ದರಿಂದ ರೈತರು ಗೋಕುಲ ಡೈರಿಗೆ ಹಾಲನ್ನು ನೀಡುತ್ತಿದ್ದರು. ಪ್ರತಿದಿನ ಸರಾಸರಿ 10 ಸಾವಿರ ಲೀಟರ್ ಹಾಲನ್ನು ಡೈರಿ ಖರೀದಿಸುತ್ತಿತ್ತು. ಈಗ ಏಕಾಏಕಿ ಡೈರಿಯು ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ. ಡೈರಿಯ ಈ ನಿರ್ಧಾರಕ್ಕೆ ಮುಗಳಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಹಾಲನ್ನು ರಸ್ತೆಗೆ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಹಾಲು ಉತ್ಪಾದಕರಾದ ಮಹಾಂತೇಶ್ ಬಡಿಗೇರ್ ಮಾತನಾಡಿ, ಕಳೆದ 8 ವರ್ಷಗಳಿಂದ ಮನೆಗೆ ಬಂದು ಗೋಕುಲ ಡೈರಿಯು ಹಾಲು ಖರೀದಿಸುತ್ತಿತ್ತು. ಈಗ ಏಕಾಏಕಿ ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ. ಬೇರೆ ಡೈರಿಗೆ ಹಾಲನ್ನು ಮಾರಲು ಹೋದರೆ, ಅವರೂ ಸ್ವೀಕರಿಸುತ್ತಿಲ್ಲ. ದಿನಕ್ಕೆ ಸಾವಿರಾರು ಲೀಟರ್ ಉತ್ಪಾದನೆಯಾಗುತ್ತಿದ್ದು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ಇತ್ತ ಗಮನಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಪ್ರಲೀಟರ್ ಹಾಲಿಗೆ 18-23 ರೂ. ದರ ನಿಗದಿಯಾಗಿದ್ದರೆ, ಮಹಾರಾಷ್ಟ್ರದ ಗೋಕುಲ್ ಡೈರಿಯು ಮೊದಲು ಹಾಲಿನ ಫ್ಯಾಟ್ ನೋಡಿಕೊಂಡು ಪ್ರತಿ ಲೀಟರ್‍ಗೆ 22-27 ರೂ. ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಹಾಲನ್ನು ರೈತರು ಗೋಕುಲ್ ಡೈರಿಗೆ ನೀಡುತ್ತಿದ್ದರು. ಇತ್ತೀಚೆಗೆ ಲೀಟರ್ ಹಾಲಿಗೆ 18 ರೂ. ನಿಗದಿ ಪಡಿಸಿದ್ದ ಡೈರಿಯು ಈಗ ಏಕಾಏಕಿ ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ.

Leave a Reply

Your email address will not be published. Required fields are marked *