Connect with us

Belgaum

ಕುಂದಾನಗರಿ ಬೆಳಗಾವಿ ಜನರಲ್ಲಿ ಢವಢವ – ಮಹಾರಾಷ್ಟ್ರ ಸಂಪರ್ಕದಲ್ಲಿದ್ದ 22 ಮಂದಿಗೆ ಕೊರೊನಾ..!

Published

on

ಚಿಕ್ಕೋಡಿ(ಬೆಳಗಾವಿ): ಪಕ್ಕದ ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪಾಸಿಟವ್ ಪ್ರಕರಣಗಳು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆತಂಕ ತಂದೊಡ್ಡಿದೆ. ಅದರಲ್ಲೂ ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಯಾವುದೇ ತಪಾಸಣೆ ಇಲ್ಲದೇ ವಾಪಸ್ಸಾಗ್ತಿರೋ ಜನರಿಂದ ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುವ ಭೀತಿ ಎದುರಾಗಿದೆ. ಈಗಾಗಲೇ ಮಹಾರಾಷ್ಟ್ರಕ್ಕೆ ಹೋಗಿ ಬಂದ ಜನರ ಸಂಪರ್ಕದಲ್ಲಿದ್ದ 22 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಪತ್ತೆಯಾಗಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ.

ಹೌದು. ಮಹಾರಾಷ್ಟ್ರದಲ್ಲಿ ಮಿತಿಮೀರಿದ ಕೊರೊನಾ ಪ್ರಕರಣಗಳು ಗಡಿ ಜಿಲ್ಲೆ ಬೆಳಗಾವಿ ಜನರ ನಿದ್ದೆಗೆಡಿಸಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲಿದೆ. ಮೊದಲು ಬಾವನಸೌಂದತ್ತಿ ಗ್ರಾಮದ 97 ವರ್ಷದ ವೃದ್ಧರೊಬ್ರು ಸಹಜ ಖಾಯಿಲೆಯಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು. ವೃದ್ಧನ ಮರಣದ ಬಳಿಕ ಕುಟುಂಬಸ್ಥರನ್ನ ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಐವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಅವರ ಟ್ರಾವೆಲ್ ಹಿಸ್ಟರಿ ಪತ್ತೆಹಚ್ಚಿದಾಗ ಕುಟುಂಬಸ್ಥರು ಕೆಲ ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ರು. ಇದರಿಂದ ಕೊರೊನಾ ಹರಡಿದೆ ಅಂತ ತಿಳಿದುಬಂದಿತ್ತು.

ಸದ್ಯ ಬಾವನಸೌಂದತ್ತಿ ಗ್ರಾಮದಲ್ಲಿ ಇಲ್ಲಿವರೆಗೂ 866 ಜನರ ಗಂಟಲು ದ್ರವ ಪರೀಕ್ಷೆ ಮಾಡಿಸಲಾಗಿದೆ. ಇದರಲ್ಲಿ 22 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜನರಲ್ಲಿ ಕೊರೊನ ಲಕ್ಷಣಗಳು ಕಂಡು ಬಂದಲ್ಲಿ ತಪಾಸಣೆಗೆ ಒಳಗಾಗುವಂತೆ ಹಾಗೂ ಕೊರೋನಾ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಮಹಾಮಾರಿ ಅಟ್ಟಹಾಸ ಮೆರೆಯುತ್ತಿರೋ ಮಹಾರಾಷ್ಟ್ರದ ಜೊತೆ ಬೆಳಗಾವಿ ಜನರು ಹೆಚ್ಚು ಸಂಪರ್ಕದಲ್ಲಿರುವುದು ಕೂಡಾ ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗೋಕೆ ಮುಖ್ಯ ಕಾರಣವಾಗಿದೆ. ಸದ್ಯ ಗ್ರಾಮದಲ್ಲಿ ಸೊಂಕು ಹರಡದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಔಷಧ ಸಿಂಪಡಣೆ ಮಾಡಿದ್ದು, ಸಭೆ, ಸಮಾರಂಭಗಳನ್ನ ರದ್ದು ಮಾಡಲಾಗಿದೆ. ಅಲ್ಲದೆ ಜನರು ಎಲ್ಲೂ ಗುಂಪುಗೂಡದಂತೆ ಆದೇಶ ಹೊರಡಿಸಲಾಗಿದೆ.

ಒಟ್ಟಿನಲ್ಲಿ ಕುಂದಾನಗರಿ ಬೆಳಗಾವಿಯ ಜನರಲ್ಲೂ ಈಗ ಮಹಾರಾಷ್ಟ್ರದಿಂದ ಕೊರೊನಾ ಹಬ್ಬುವ ಭೀತಿ ಹೆಚ್ಚಾಗಿದೆ. ಬೆಳಗಾವಿ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದು, ಜನರ ಸಹಕಾರ ಕೂಡಾ ಸಿಕ್ಕಲ್ಲಿ ಕೋವಿಡ್ ನಿಯಂತ್ರಿಸಬಹುದಾಗಿದೆ.

Click to comment

Leave a Reply

Your email address will not be published. Required fields are marked *