Connect with us

Belgaum

ಬೆಳಗಾವಿ ಬೈ ಎಲೆಕ್ಷನ್ – ಟಿಕೆಟ್ ಬೇಕೆಂದ ‘ಕೈ’ ಕಾರ್ಯಕರ್ತ

Published

on

– ಬಿಜೆಪಿ ಟಿಕೆಟ್‍ಗಾಗಿ ಖ್ಯಾತ ವೈದ್ಯನ ಲಾಬಿ

ಬೆಳಗಾವಿ: ಕುಂದಾನಗರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆ ಆಗುವ ಸಾಧ್ಯತೆ ಇದ್ದು ಟಿಕೆಟ್ ಯಾರಿಗೆ ಸಿಗುತ್ತೆ ಎಂಬ ಚರ್ಚೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಜೋರಾಗಿಯೇ ಇದೆ. ವಿಶೇಷ ಅಂದರೆ ಇದೇ ಮೊದಲ ಬಾರಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನಾನೂ ಟಿಕೆಟ್ ಆಕಾಂಕ್ಷಿ ಅಂತಾ ಬಹಿರಂಗವಾಗಿ ಹೇಳಿದ್ದಾರೆ. ಮತ್ತೊಂದೆಡೆ ಬಿಜೆಪಿ ಟಿಕೆಟ್ ಪಡೆಯಲು ಖ್ಯಾತ ವೈದ್ಯನೋರ್ವ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲೂ ಉಪಚುನಾವಣೆ ದಿನಾಂಕ ನಿಗದಿಯಾಗಬಹುದು. ಇದೇ ಮೊದಲ ಬಾರಿಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಂತಾ ಬಹಿರಂಗವಾಗಿ ಜಿಲ್ಲಾ ನಾಯಕರೊಬ್ಬರು ಹೇಳಿದ್ದಾರೆ. ಅವರೇ ಲಕ್ಕಣ್ಣ ಸವಸುದ್ದಿ. ಕಳೆದ 20 ವರ್ಷಗಳಿಂದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಲಕ್ಕಣ್ಣ ಸವಸುದ್ದಿ ಜಾರಕಿಹೊಳಿ ಬ್ರದರ್ಸ್ ಬದ್ಧವೈರಿ ಅಂತಾನೇ ಜಿಲ್ಲಾ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.

ಸದ್ಯ ಬೆಳಗಾವಿ ಲೋಕಸಭೆ ಕಾಂಗ್ರೆಸ್ ಟಿಕೆಟ್ ತಮಗೆ ನೀಡುವಂತೆ ರಾಜ್ಯ ನಾಯಕರಿಗೆ ಮನವಿ ಮಾಡಿದ್ದಾಗಿ ಲಕ್ಕಣ್ಣ ತಿಳಿಸಿದ್ದಾರೆ. ತಾವು ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದು, ಪಕ್ಷ ಸಂಘಟನೆಯಲ್ಲಿ ಭಾಗಿಯಾಗಿದ್ದೇನೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ನನ್ನ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರನ್ನಾಗಿ ಮಾಡಿದ್ರು. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಪಕ್ಷ ಸಹ ಕೇಡರ್ ಬೇಸ್ ಪಾರ್ಟಿ ಎಂಬ ಸಂದೇಶ ಸಾರಿದ ಹಾಗೇ ಆಗುತ್ತೆ. ಈಗಾಗಲೇ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರ ಭೇಟಿಯಾಗಿ ಚರ್ಚೆ ಮಾಡಿದ್ದು ತಮಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದಾಗಿ ಲಕ್ಕಣ್ಣ ಸವಸುದ್ದಿ ತಿಳಿಸಿದ್ದಾರೆ.

ಇನ್ನು ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ವಿಚಾರಕ್ಕೆ ಬಂದ್ರೆ ನಾಯಕರು, ನಾಯಕರ ಸಂಬಂಧಿಕರು, ಕಾರ್ಯಕರ್ತರು, ವೈದ್ಯರು, ವಕೀಲರು, ಅನಿವಾಸಿ ಭಾರತೀಯರು ಹೀಗೆ ಒಟ್ಟು ಬರೋಬ್ಬರಿ ಶತಕದ ಸನಿಹಕ್ಕೆ ಆಕಾಂಕ್ಷಿಗಳ ಪಟ್ಟಿ ಬಂದು ತಲುಪಿದೆ. ಇದೆಲ್ಲದರ ಮಧ್ಯೆ ಬೆಳಗಾವಿಯ ಖ್ಯಾತ ವೈದ್ಯ ಎಲುಬು ಕೀಲು ತಜ್ಞ ಡಾ.ರವಿ ಪಾಟೀಲ್ ಸಹ ತಮಗೆ ಟಿಕೆಟ್ ನೀಡುವಂತೆ ನಾಯಕರಲ್ಲಿ ಮನವಿ ಮಾಡಿದ್ದಾರೆ. ಬಯೋಡೇಟಾ ಕೈಯಲ್ಲಿ ಹಿಡಿದುಕೊಂಡು ಬೆಂಗಳೂರು ಅಷ್ಟೇ ಅಲ್ಲಾ ದೆಹಲಿ ದಂಡಯಾತ್ರೆ ಮಾಡಿ ಬಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದವರು ಡಾ.ರವಿ ಪಾಟೀಲ್. ಆದರೆ ಆ ವೇಳೆ ಅನಿಲ್ ಬೆನಕೆಗೆ ಟಿಕೆಟ್ ನೀಡಿದ್ದರಿಂದ ಟಿಕೆಟ್ ವಂಚಿತರಾಗಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಈಗ ಲೋಕಸಭಾ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಆಕ್ಟೀವ್ ಆಗಿರುವ ಡಾ.ರವಿ ಪಾಟೀಲ್ ತಮಗೆ ಟಿಕೆಟ್ ಸಿಗುತ್ತೆ ಎಂಬ ಭರವಸೆಯಲ್ಲಿದ್ದಾರೆ.

ಒಟ್ಟಾರೆಯಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಹಲವು ಜನರು ಆಕಾಂಕ್ಷಿಗಳಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಇದೇ ಮೊದಲ ಬಾರಿ ಕಾರ್ಯಕರ್ತರೊಬ್ಬರು ನಾನೂ ಟಿಕೆಟ್ ಆಕಾಂಕ್ಷಿ ಅಂತಾ ಬಹಿರಂಗವಾಗಿ ಹೇಳಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವ ಮೂಲಕ ತಮ್ಮದು ಕೇಡರ್ ಬೇಸ್ ಪಾರ್ಟಿ ಎಂಬುದನ್ನು ಕಾಂಗ್ರೆಸ್ ಸಂದೇಶ ರವಾನಿಸುತ್ತಾ ಅಥವಾ ಪ್ರಭಾವಿ ನಾಯಕರನ್ನೇ ಕಣಕ್ಕೀಳಿಸುತ್ತಾ ಅಂತಾ ಕಾದು ನೋಡಬೇಕು.

Click to comment

Leave a Reply

Your email address will not be published. Required fields are marked *