Tuesday, 16th July 2019

ಮತದಾನಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದ ಮೋದಿ

ನವದೆಹಲಿ: ಮತದಾನ ಎಲ್ಲರ ಮೂಲಭೂತ ಕರ್ತವ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇವತ್ತು ಮತದಾನ ಮಾಡಿದ್ದಾರೆ. ಅದಕ್ಕೂ ಮುನ್ನ ತಮ್ಮ ತಾಯಿಯವರ ಆಶೀರ್ವಾದ ಪಡೆದಿರುವುದು ವಿಶೇಷವಾಗಿತ್ತು.

ದೇಶದಲ್ಲಿ ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇಂದು ಮೋದಿ ಅವರು ಅಹಮದಾಬಾದ್‍ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ. ಮತದಾನಕ್ಕೂ ಮುನ್ನ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

“2019ನೇ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ದಾಖಲೆಯ ಪ್ರಮಾಣದಲ್ಲಿ ಆಗಬೇಕು. ನಿಮ್ಮ ಮತ ತುಂಬ ಅಮೂಲ್ಯವಾದುದ್ದು, ನೀವು ಹಾಕುವ ಒಂದು ಮತ ಮುಂದಿನ ದಿನಗಳಲ್ಲಿ ನಿಮ್ಮ ರಾಷ್ಟ್ರದ ದಿಕ್ಕನ್ನು ಬದಲಿಸುತ್ತದೆ. ನಾನು ಅಹಮದಾಬಾದ್‍ನಲ್ಲಿ ಮತದಾನ ಮಾಡುತ್ತಿದ್ದೇನೆ ನೀವು ಮಾಡಿ”. ಎಂದು ಟ್ವೀಟ್ ಮಾಡಿದ್ದಾರೆ.

ದಾಖಲೆಯ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಜನರಿಗೆ ಮೋದಿ ಕರೆಕೊಟ್ಟಿದ್ದಾರೆ. ಮೋದಿ ಅವರು ಮತದಾನ ಮಾಡಿದ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧೆಗಿಳಿದಿದ್ದಾರೆ.

Leave a Reply

Your email address will not be published. Required fields are marked *