Thursday, 21st February 2019

Recent News

ತ್ರಿಮೂರ್ತಿಗಳಿಂದಾಗಿ ನನ್ನ ರಾಜಕೀಯ ಜೀವನ ಹಾಳಾಯ್ತು: ಆತ್ಮಚರಿತ್ರೆಯಲ್ಲಿ ಕೈ ನಾಯಕರ ಬಗ್ಗೆ ಬಿ.ಎ.ಮೊಯಿದ್ದೀನ್ ಅಸಮಾಧಾನ

ಮಂಗಳೂರು: ಮಾಜಿ ಸಚಿವ ಬಿ.ಎ.ಮೊಯ್ದೀನ್ ಮೊನ್ನೆಯಷ್ಟೆ ನಿಧನರಾಗಿದ್ದಾರೆ. ಆದರೆ, ಅದಕ್ಕೂ ಮುನ್ನ ಮೊಯಿದ್ದೀನ್ ಬರೆದಿಟ್ಟ ಆತ್ಮಚರಿತ್ರೆ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಸದ್ದು ಮಾಡುವ ಲಕ್ಷಣ ಕಂಡುಬಂದಿದೆ.

ತನ್ನನ್ನು ರಾಜಕೀಯದಲ್ಲಿ ಮೇಲೆ ಬರದಂತೆ ತುಳಿದು ಹಿಂಡಿ ಹಿಪ್ಪೆ ಮಾಡಿದ್ದು ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ. ಈ ಮೂವರು ತ್ರಿಮೂರ್ತಿಗಳಿಂದಾಗಿ ನನ್ನ ರಾಜಕೀಯ ಜೀವನ ಹಾಳಾಗಿ ಹೋಯ್ತು ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಆತ್ಮಕಥೆಯಾದ `ನನ್ನೊಳಗಿನ ನಾನು’ ಎಂಬ ಪುಸ್ತಕದಲ್ಲಿ ಕೈ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕಾಂಗ್ರೆಸ್ ಪಾಲಿಗೆ ನಾಲ್ಕಾಣೆ ಸದಸ್ಯನೂ ಅಲ್ಲದ ಜನಾರ್ದನ ಪೂಜಾರಿಯನ್ನು ರಾಜಕೀಯಕ್ಕೆ ಕರೆತಂದಿದ್ದು ವೀರಪ್ಪ ಮೊಯ್ಲಿ. ಆಗಿನ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕೆ.ಕೆ. ಶೆಟ್ಟಿ ಜೊತೆಗಿನ ವೈಮನಸ್ಸಿನಿಂದಾಗಿ ಜಸ್ಟ್ ಒಬ್ಬ ವಕೀಲನಾಗಿದ್ದ ಜನಾರ್ದನ ಪೂಜಾರಿಯನ್ನು ಇಂದಿರಾ ಗಾಂಧಿಗೆ ಪರಿಚಯಿಸಿ, 1977ರಲ್ಲಿ ನೇರವಾಗಿ ಲೋಕಸಭೆ ಚುನಾವಣೆಯ ಟಿಕೆಟ್ ಕೊಡಿಸಿದ್ದರು. ಆಗ ಅವರ ಹೆಸರು ಜನಾರ್ದನ ಅಷ್ಟೇ ಆಗಿತ್ತು, ಆದರೆ ಬಿಲ್ಲವ ಜನರನ್ನು ಓಲೈಸಲು ದೃಷ್ಟಿಯಿಂದ ಜನಾರ್ದನ ಹೆಸರಿನ ಜೊತೆಗೆ ಪೂಜಾರಿ ಎಂದು ಸೇರಿಸಿ ಜನಾರ್ದನ ಪೂಜಾರಿ ಎಂದು ನಾಮಕರಣ ಮಾಡಿದ್ದು ವೀರಪ್ಪ ಮೊಯ್ಲಿ ಎಂದು ಬರೆದಿದ್ದಾರೆ.

ಪೂಜಾರಿ ಅಧಿಕಾರ ಪಡೆದ ಬಳಿಕ ತನ್ನ ಏಳ್ಗೆಗೆ ಕಾರಣರಾದವರನ್ನೆಲ್ಲ ತುಳಿದರು. ಗ್ರಾಮ ಪಂಚಾಯ್ತಿ ಸದಸ್ಯನಿಂದ ಹಿಡಿದು ಮೇಯರ್, ಶಾಸಕ ಯಾರಾಗಬೇಕು ಅನ್ನೋದು ತಾನು ಹೇಳಿದಂತೆ ನಡೆಯುವಂತೆ ನೋಡಿಕೊಂಡರು. ಆಸ್ಕರ್ ಅನ್ನು ಉಡುಪಿಗೆ ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿಸಿ, 1980 ರಲ್ಲಿ ಲೋಕಸಭೆ ಟಿಕೆಟ್ ಸಿಗುವಂತೆ ಮಾಡಿದ್ದೆ. ಆದರೆ 1978ರಿಂದ ಬಂಟ್ವಾಳ ಶಾಸಕನಾಗಿದ್ದ ತನಗೆ 1983ರ ಚುನಾವಣೆಯಲ್ಲಿ ಪೂಜಾರಿ, ಮೊಯ್ಲಿ, ಆಸ್ಕರ್ ಸೇರಿ ಟಿಕೆಟ್ ಸಿಗದಂತೆ ಮಾಡಿದ್ದರು. ನನ್ನನ್ನು ಮೂಲೆಗುಂಪು ಮಾಡಿ, ರಮಾನಾಥ ರೈಗೆ ಟಿಕೆಟ್ ಕೊಡಿಸಿದ್ದರು. 1980ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ದೇವರಾಜ ಅರಸು ಜೊತೆಗಿದ್ದ ಕಾರಣಕ್ಕೆ ನನ್ನ ಮೇಲೆ ಹಗೆ ತೀರಿಸಿಕೊಂಡರು. ಈ ಮೂವರಿಗೆ ನಾನೂ ಎಷ್ಟೇ ಅಂಗಲಾಚಿದರೂ ನನ್ನನ್ನು ರಾಜಕೀಯವಾಗಿ ತುಳಿದುಬಿಟ್ಟರು. ಬಳಿಕ ನನಗೆ 1989ರಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ರಾಮಕೃಷ್ಣ ಹೆಗಡೆ ಅಂತಾ ಬರೆದುಕೊಂಡಿದ್ದಾರೆ.

ಮೊಯಿದ್ದೀನ್ ರವರ ಆತ್ಮಚರಿತ್ರೆ ನನ್ನೊಳಗಿನ ನಾನು ಜುಲೈ 20 ರಂದು ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *