Karnataka
ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾದ್ರೆ ನಮ್ಮ ಸ್ನೇಹಿತರಿಗೂ ಸ್ಥಾನ ಸಿಗಲಿದೆ: ಬಿ.ಸಿ.ಪಾಟೀಲ್

– ಸಂಕ್ರಾಂತಿಗೆ ವಿಸ್ತರಣೆ ಆದ್ರೆ ಇಂಧನ ಖಾತೆ ಕೊಟ್ರೆ ಒಳಿತು- ಸಚಿವ ನಾಗೇಶ್
ಕೋಲಾರ: ಸಿಎಂ ತೆಗದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ಖಾತೆ ಬದಲಾವಣೆ ಮಾಡಿದರೂ ಅಡ್ಡಿ ಇಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಬೇಕು. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಇನ್ನೂ ಮುನಿರತ್ನ, ಆರ್.ಶಂಕರ್ ಹಾಗೂ ಎಂಟಿಬಿಗೆ ಸಚಿವ ಸ್ಥಾನ ಸಿಗಬೇಕಿದೆ, ಸಿಗುತ್ತೆ. ವಿಶ್ವನಾಥ್ ಅವರಿಗೂ ಸಿಗುತ್ತೆ ಎಂದರು.
ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳೋದು ಶಾಸಕರ ಹಕ್ಕು. ಸಿಎಂ ಎಲ್ಲ ಶಾಸಕರ ಸಮಸ್ಯೆ ಆಲಿಸಿ ಆರ್ಥಿಕ ಸಂಕಷ್ಟದ ನಡುವೆ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಬಿಜೆಪಿ ಮೇಲೆ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ನಮ್ಮ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಜೆಡಿಎಸ್ ಸಾಫ್ಟ್ ಕಾರ್ನರ್ನ್ನು ನಾವು ಸ್ವಾಗತ ಮಾಡುತ್ತೇವೆ. ಬಿಜೆಪಿಗೆ ಸಾಕಷ್ಟು ಸಂಖ್ಯಾಬಲವಿದೆ. ಹೊಂದಾಣಿಕೆ ಅವಶ್ಯಕತೆ ಇಲ್ಲ ಎಂದರು.
ಬಜೆಟ್ ಮೇಲೆ ನಮ್ಮ ನಿರೀಕ್ಷೆ ಹೆಚ್ಚಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷ ಕೊಡಬೇಕು. ಹಾವು ಕಚ್ಚಿ ಸಾವಿಗಿಡಾದರೆ ನೀಡುವ ಪರಿಹಾರವನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಬೇಕು. ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರ ಮಕ್ಕಳಿಗಿರುವ ಮೀಸಲಾತಿಯನ್ನು ಶೇ.40ರಿಂದ 50ಕ್ಕೆ ಹೆಚ್ಚಿಸಲು ಮನವಿ ಮಾಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ಸಚಿವ ನಾಗೇಶ್, ಸಚಿವ ಸಂಪುಟ ವಿಸ್ತರಣೆ ವೇಳೆ ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ, ನಾಳೆ ನಾಳೆ ಎಂದು ಮುಂದೂಡಲಾಗುತ್ತಿದೆ. ಸಂಕ್ರಾಂತಿ ಮುಗಿದ ಬಳಿಕ ಸಂಪುಟ ವಿಸ್ತರಣೆ ಆಗುವುದರಲ್ಲಿ ಅನುಮಾನವಿಲ್ಲ. ಖಾತೆ ಬದಲಾವಣೆಯಾದರೆ ಇಂಧನ ಖಾತೆ ಕೊಡಲಿ. ಎಲ್ಲರಿಗಿಂತ ಚನ್ನಾಗಿ ನಾನು ನಿಭಾಯಿಸಬಲ್ಲೆ. ಇಂಧನ ಇಲಾಖೆಯಲ್ಲಿ ನನಗೆ 34 ವರ್ಷ ಅನುಭವವಿದೆ. ನನ್ನ ಹಿನ್ನೆಲೆ, ಟ್ರ್ಯಾಕ್ ರೆಕಾರ್ಡ್ ಅಧ್ಯಯನ ಮಾಡಿ ಸಿಎಂ ಇಂಧನ ಖಾತೆ ಕೊಡಲಿ. ಈ ಹಿಂದೆ ಕಾರಣಾಂತರಗಳಿಂದ ನನಗೆ ಇಂಧನ ಖಾತೆ ತಪ್ಪಿತು. ಸಿಎಂಗೂ ನನ್ನ ಬಗ್ಗೆ ಗೊತ್ತಿದೆ ಕೊಟ್ಟರೆ ನಿಭಾಯಿಸುವೆ ಎಂದರು.
