Connect with us

Bengaluru City

ಸಂಪತ್ ರಾಜ್ ಕುಟುಂಬ ಸದಸ್ಯರ ಫೋನ್ ಸ್ವಿಚ್ ಆಫ್ – ಪತ್ತೆಗೆ ವಿಶೇಷ ತಂಡ ರಚನೆ

Published

on

ಬೆಂಗಳೂರು: ಕಾಡುಗೊಂಡನಹಳ್ಳಿ(ಕೆಜೆ ಹಳ್ಳಿ) ಮತ್ತು ದೇವರಜೀವನ ಹಳ್ಳಿ(ಡಿಜೆ ಹಳ್ಳಿ)  ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಪತ್ತೆಗೆ ಸಿಸಿಬಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪರಾರಿಯಾಗಿರುವ ಸಂಪತ್ ರಾಜ್ ಜೊತೆ ಅವರ ಕುಟುಂಬದ ಸದಸ್ಯರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಹೀಗಿದ್ದರೂ ಮಹತ್ವದ ಸುಳಿವನ್ನು ಸಿಸಿಬಿ ಕಲೆ ಹಾಕಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದ್ದು ಯಾವುದೇ ಕ್ಷಣದಲ್ಲಿ ಸಂಪತ್ ರಾಜ್ ಬಂಧನವಾಗುವ ಸಾಧ್ಯತೆಯಿದೆ.

ಕೊರೊನಾ ಸೋಂಕು ತಗುಲಿದೆ ಎಂದು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಸಂಪತ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡೋ ಭಯದಲ್ಲಿ ಸಿನಿಮಾ ಶೈಲಿಯಲ್ಲಿ ರಾತ್ರೋರಾತ್ರಿ ಪರಾರಿಯಾಗಿದ್ದು, ಗುರುವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಸಿಬಿ ತಂಡಕ್ಕೆ ಶಾಕ್ ಆಗಿದೆ. ಬುಧವಾರ ಮಧ್ಯರಾತ್ರಿಯೇ ಡಿಸ್ಚಾರ್ಜ್ ಆಗಿ ಪರಾರಿಯಾಗಿದ್ದಾರೆ.  ಇದನ್ನೂ ಓದಿ: ಎಫ್‌ಬಿ ಪೋಸ್ಟ್‌ ನೆಪ ಮಾತ್ರ – ಅಖಂಡ ಮನೆಗೆ ಬೆಂಕಿ ಹಂಚಿದ್ದು ಪೂರ್ವನಿಯೋಜಿತ ಸಂಚು

ಸಂಪತ್ ರಾಜ್ ಡಿಸ್ಚಾರ್ಜ್ ಮಾಡುವಾಗ ಸಿಸಿಬಿ ಅಧಿಕಾರಿಗಳ ಗಮನಕ್ಕೆ ತರುವಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸಿಸಿಬಿ ಗಮನಕ್ಕೆ ತರದೇ ರಾತ್ರೋರಾತ್ರಿ ಸಂಪತ್ ರಾಜ್ ಡಿಸ್ಚಾರ್ಜ್ ಆಗಿದ್ದು, ಪರಾರಿಯಾಗಿದ್ದಾರೆ. ಕಾಕ್ಸ್ ಟೌನ್ ನಲ್ಲಿರುವ ಸಂಪತ್ ರಾಜ್ ಮನೆ ಸಹ ಬೀಗ ಹಾಕಿದ್ದು, ಸಿಸಿಬಿ ತಂಡ ಸಂಪತ್ ರಾಜ್ ಗಾಗಿ ಹುಡುಕಾಟ ನಡೆಸಿದೆ. ಅಲ್ಲದೆ ಡಿಸ್ಚಾರ್ಜ್ ಮಾಡಿದ್ದರ ಕುರಿತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.

ಸಂಪತ್ ರಾಜ್ ಕೇರಳ ಕಡೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಂಪತ್ ರಾಜ್ ಮೆಡಿಕಲ್ ರಿಪೋರ್ಟ್ ನೋಡಿ ಸಿಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಸೆಪ್ಟೆಂಬರ್ 14 ರಂದು ಅಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್, ಒಂದೇ ತಿಂಗಳಲ್ಲಿ 4 ಬಾರಿ ಅಡ್ಮಿಟ್, 4 ಬಾರಿ ಡಿಸ್ಚಾರ್ಜ್ ಆಗಿದ್ದಾರೆ. ಈಗ ಮೆಡಿಕಲ್ ರಿಪೋರ್ಟ್ ಸೀಜ್ ಮಾಡಿ ಸಿಸಿಬಿ ತಂಡ ಪರಿಶೀಲನೆ ನಡೆಸಿದೆ. ಸಂಪತ್ ರಾಜ್‍ಗೆ ಚಿಕಿತ್ಸೆ ನೀಡಿದ ವೈದ್ಯರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ 50 ಪುಟಗಳ ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ.

ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸಂಪತ್ ರಾಜ್ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂಬ ಅಂಶ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿತ್ತು.

Click to comment

Leave a Reply

Your email address will not be published. Required fields are marked *

www.publictv.in