Wednesday, 21st November 2018

Recent News

ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

ಮಡಿಕೇರಿ: ವಾಡಿಕೆಗಿಂತ ಶೇಕಡಾ 73 ರಷ್ಟು ಮಳೆಯಾಗಿದೆ. ಪ್ರವಾಹ ಸ್ಥಳಗಳಿಂದ ಈಗಾಗಲೇ 3,120 ಜನರನ್ನು ರಕ್ಷಿಸಿ ತರಲಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವೈಮಾನಿಕ ಸಮೀಕ್ಷೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಲೆಕ್ಕ ಹಾಕಲು ಹೆಚ್ಚು ದಿನಗಳು ಬೇಕಾಗುತ್ತದೆ. ಅಲ್ಲಲ್ಲಿ ಗುಡ್ಡ ಕುಸಿತವಾಗಿದೆ, ರಸ್ತೆಗಳು ಬಿರುಕುಬಿಟ್ಟಿವೆ. ಹಿಂದೆಂದು ಕಾಣದ ಅನಾಹುತಗಳು ಆಗುತ್ತಿವೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದರು.

ಇಂತಹ ಸಂದರ್ಭದಲ್ಲಿ ಕಳ್ಳಾಟ ಆಡುವ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ವ್ಯವಸ್ಥೆ ಮಾಡಲು ಬಿಬಿಎಂಪಿ ಅಧಿಕಾರಿಗಳನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗುತ್ತದೆ. ಆದರೆ ಕೆಲವರು ರಕ್ಷಣಾ ಕಾರ್ಯನಿರತರ ಮೇಲೆ ಕೆಲವರು ರಾಜಕೀಯ ಪ್ರದರ್ಶಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ, ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯ ಮೇಲೆ ಒತ್ತಡ ತರುವ ಕೆಲಸ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಸಂತ್ರಸ್ತರಿಗೆ ಸರ್ಕಾರವು ಅಗತ್ಯ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಮೊಬೈಲ್ ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಜೀವನದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವರು ಅವರಿಗೆ ಬೆರಳು ಮಾಡಿ ತೋರಿಸುತ್ತಿದ್ದು, ಸಣ್ಣತನ ಮೆರೆಯುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.


ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ಕಷ್ಟವಾಗುತ್ತಿದೆ. 40 ಪರಿಹಾರ ಕೇಂದ್ರ ಕೇಂದ್ರಗಳು ವ್ಯವಸ್ಥೆ ಮಾಡಲಾಗಿದ್ದು, ಕೆಲವರು ಪರಿಹಾರ ಕೇಂದ್ರಗಳಲ್ಲಿ ಇರಲು ಇಷ್ಟ ಪಡುತ್ತಿಲ್ಲ. ಹೀಗಾಗಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. ಮಳೆ ಆರ್ಭಟ ನಿಂತ ತಕ್ಷಣವೇ ಸರ್ಕಾರದ ಭೂಮಿ ಗುರುತು ಮಾಡಿ ಶೆಡ್ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಮುಂದಾಗಲಿದೆ ಎಂದು ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *