Wednesday, 29th January 2020

ಆಸ್ಪತ್ರೆಯಲ್ಲಿ ಅಟೆಂಡರ್ ಗಳೇ ಡಾಕ್ಟರ್- ಬೆಂಗ್ಳೂರಿನಲ್ಲಿವೆ ಕಿಲ್ಲಿಂಗ್ ಹಾಸ್ಪಿಟಲ್

ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾದರೆ ಎಲ್ಲರೂ ಆಸ್ಪತ್ರೆಗೆ ಹೋಗುತ್ತಾರೆ. ಅಪ್ಪಿ ತಪ್ಪಿ ನೀವು ಸಿಲಿಕಾನ್ ಸಿಟಿಯಲ್ಲಿರುವ ಈ ಆಸ್ಪತ್ರೆಗೆ ಹೋದರೆ ನಿಮ್ಮ ಪ್ರಾಣ ಪಕ್ಷಿಯೇ ಹಾರಿ ಹೋಗಲಿದೆ. ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಚರಣೆಯಲ್ಲಿ ಬಿಬಿಎಂಪಿಯ ಆಸ್ಪತ್ರೆಯಲ್ಲಿರುವ ಮುನ್ನಾಬಾಯಿ ಎಂಬಿಬಿಎಸ್ ಡಾಕ್ಟರ್ ಗಳ ಅಸಲಿಯತ್ತು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಡ ಜನರಿಗೆ ಉತ್ತಮ ಮತ್ತು ಗುಣಮಟ್ಟದ ಚಿಕಿತ್ಸೆ ಸಿಗಲಿ ಎಂದು ಬಿಬಿಎಂಪಿ ಆಸ್ಪತ್ರೆಗಳನ್ನು ಆರಂಭಿಸಿದೆ. ಈ ಪಾಲಿಕೆಯ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಗಳ ಬದಲಿಗೆ ಅಟೆಂಡರ್ ಗಳೇ ಯದ್ವಾತದ್ವಾ ಮಾತ್ರೆಗಳನ್ನು ಬರೆದುಕೊಡುತ್ತಾರೆ. ಬಿಬಿಎಂಪಿ ಪಾಲಿಕೆಯ ಆಸ್ಪತ್ರೆಗಳ ನರಕ ಸದೃಶಗಳನ್ನ ನಿಮ್ಮ ಪಬ್ಲಿಕ್ ಟಿವಿ ಸ್ಟಿಂಗ್ ಅಪರೇಷನ್ ಮೂಲಕ ಬಟಾಬಯಲು ಮಾಡಿದೆ.

ಸ್ಥಳ: ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ಯಾಲೇಸ್ ಗುಟ್ಟಹಳ್ಳಿ
ಈ ಆಸ್ಪತ್ರೆಗೆ ತೆರಳಿದ್ರೆ ಇಲ್ಲಿಯ ಅಟೆಂಡರ್ ತಾನೇ ಡಾಕ್ಟರ್ ಎಂದು ರೋಗಿಗಳನ್ನು ಕರೆದು ಚಿಕಿತ್ಸೆ ನೀಡಲು ಮುಂದಾಗುತ್ತಾನೆ. ಸರಿಯಾಗಿ ಬಿಪಿ ಚೆಕ್ ಮಾಡೋಕೆ ಬರದಿದ್ದರೂ, ಪರಿಶೀಲಿಸಿದ ರೀತಿ ನಾಟಕ ಆಡುತ್ತಾನೆ. ಇದೇ ಅಟೆಂಡರ್ ಆಸ್ಪತ್ರೆಗೆ ಬರುವ ಗರ್ಭಿಣಿ, ಮಕ್ಕಳಿಗೂ ಚಿಕಿತ್ಸೆ ನೀಡುತ್ತಾನೆ. ವೈದ್ಯರೇ ಇಲ್ಲದ ಈ ಆಸ್ಪತ್ರೆಯಲ್ಲಿ ಓರ್ವ ಮಹಿಳಾ ನರ್ಸ್ ಮತ್ತು ಅಟೆಂಡರ್ ಚಿಕಿತ್ಸೆ ನೀಡುತ್ತಾರೆ. ಓವರ್ ಡೋಸ್ ಹೊಂದಿರುವ ಟ್ಯಾಬ್ಲೆಟ್ ನೀಡಿ ರೋಗಿಗಳನ್ನು ಸಾಗಿ ಹಾಕುವ ಕೆಲಸ ಮಾಡುತ್ತಾರೆ. ಏನ್ ಸರ್, ಡಾಕ್ಟರ್ ಇಲ್ವಾ ಅಂದ್ರೆ, ಇದು ಸರ್ಕಾರಿ ಆಸ್ಪತ್ರೆ, ನಾವು ಚಿಕಿತ್ಸೆ ನೀಡ್ತೀವಿ ಅಲ್ವ ಎಂದು ನರ್ಸ್ ಹೇಳುತ್ತಾಳೆ.

ಸ್ಥಳ: ಮಂಜುನಾಥನಗರ ಆರೋಗ್ಯ ಕೇಂದ್ರ, 1ನೇ ಮುಖ್ಯರಸ್ತೆ, ರಾಜಾಜಿನಗರ. ವಾರ್ಡ್ 99
ಈ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಿದ್ದರೂ ಚಿಕಿತ್ಸೆ ನೀಡಲ್ಲ. ಯಾಕೆ ಮೇಡಂ ಚಿಕಿತ್ಸೆ ನೀಡಲ್ವಾ ಅಂದ್ರೆ ನಾವು ರೆಸ್ಟ್ ಮಾಡೋದು ಬೇಡ್ವಾ ಎಂದು ಕಾಫಿ ಹೀರುತ್ತಾ ಬಾಗಿಲು ಹಾಕಿಕೊಳ್ಳುತ್ತಾರೆ.

ತಜ್ಞ ವೈದ್ಯರ ಪ್ರಕಾರ 250 ಎಂಜಿ ಮಾತ್ರೆಗಳನ್ನು ದಿನಕ್ಕೆ ಮೂರು ಬಾರಿ ನೀಡಬಹುದು. ಆದ್ರೆ ಪಾಲಿಕೆಯ ಆಸ್ಪತ್ರೆಗಳಲ್ಲಿ 500 ಎಂಜಿಯ ಮಾತ್ರೆಗಳನ್ನು ಮಕ್ಕಳಿಗೆ ನೀಡುತ್ತಾರೆ. ಕೆಲವು ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ರೋಗಿಗಳಿಗೂ ಒಬ್ಬರೇ ಚಿಕಿತ್ಸೆ ನೀಡುತ್ತಾರೆ. ಬಡವರಿಗೆ ಸಹಾಯವಾಗಬೇಕಿದ್ದ ಪಾಲಿಕೆಯ ಆಸ್ಪತ್ರೆಗಳು ಜೀವಕ್ಕೆ ಮಾರಕವಾಗುತ್ತಿವೆ. ಆಸ್ಪತ್ರೆಗಳ ಮೇಲ್ವಿಚಾರಣೆ ನಡೆಸಬೇಕಿದ್ದ ಬಿಬಿಎಂಪಿ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *