Connect with us

Bengaluru City

ಗೋವಾ ಮಾದರಿಯಲ್ಲಿ ಬೆಂಗ್ಳೂರಲ್ಲಿ ನಾಯಿ ಗಣತಿ – ಶ್ವಾನ್ ಆ್ಯಪ್ ಮೂಲಕ ಸರ್ವೇ

Published

on

ಬೆಂಗಳೂರು: ಗೋವಾ ಮಾದರಿಯಲ್ಲಿ ಬೆಂಗಳೂರಿನಲ್ಲೂ ನಾಯಿ ಗಣತಿ ಮಾಡಲು ಬಿಬಿಎಂಪಿ ಮುಂದಾಗಿದೆ. ಏಳು ವರ್ಷಗಳ ಬಳಿಕ ಈ ಗಣತಿ ಮಾಡಲಾಗುತ್ತಿದ್ದು, ಇದಕ್ಕಾಗಿ ಶ್ವಾನ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಾಯಿಗಳ ಗಣತಿಯನ್ನು ವೈಜ್ಞಾನಿಕವಾಗಿ ಮಾಡುವ ಉದ್ದೇಶದಿಂದ ಬಿಬಿಎಂಪಿಯು ಪಶು ವೈದ್ಯಕೀಯ ಸೇವೆ ಇಲಾಖೆಯ ಆ್ಯಪ್ ಮೂಲಕ ನಾಯಿಗಣತಿ ಮಾಡಲು ಮುಂದಾಗಿದೆ. ಈ ಸಮೀಕ್ಷೆಗೆ ಗೋವಾದ ಪಶುವೈದ್ಯಕೀಯ ಸೇವೆ ಇಲಾಖೆಯು ನೆರವು ನೀಡುತ್ತಿದ್ದು, ಸೆಪ್ಟೆಂಬರ್ 12 ರಿಂದ 20 ದಿನಗಳ ಕಾಲ ಬಿಬಿಎಂಪಿಯೊಂದಿಗೆ ಸಮೀಕ್ಷೆ ನಡೆಸಲಿದೆ.

ಈ ಸಮೀಕ್ಷೆ ನಡೆಸುವ ತಂಡದಲ್ಲಿ ಗೋವಾದ 28 ಜನ ಹಾಗೂ ಬಿಬಿಎಂಪಿಯ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಇರಲಿದ್ದಾರೆ. ಗೋವಾ ಮತ್ತು ಬಿಬಿಎಂಪಿಯ ಸಿಬ್ಬಂದಿಗಳನ್ನು 13 ತಂಡಗಳಾಗಿ ವಿಂಗಡನೆ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್‌ಗಳಲ್ಲಿ ನಾಯಿ ಗಣತಿ ನಡೆಯಲಿದೆ.

ಹಾಗೆಯೇ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಮಾಹಿತಿಯೂ ಇದರಲ್ಲಿ ಇರಲಿದೆ. ರೇಬಿಸ್‍ನಿಂದ ನಾಯಿಗಳ ಸಂತತಿಯಲ್ಲಿ ಉಂಟಾಗಿರುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಸರ್ವೇ ನಡೆಸಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಾಯಿಗಳ ಗಣತಿ ತೆಗೆದುಕೊಳ್ಳುವುದರ ಜೊತೆಗೆ ಸರ್ವೇಯಿಂದ ನಾಯಿಗಳ ಸಂತಾನ ಶಕ್ತಿ, ನಾಯಿ ಮರಿಗಳು ಹಾಗೂ ನಾಯಿಗಳ ವಾಸ ಸ್ಥಾನ, ಹೆಣ್ಣು ನಾಯಿಗಳೆಷ್ಟು? ಗಂಡು ನಾಯಿಗಳು ಸಂಖ್ಯೆ ಎಷ್ಟು ಎನ್ನುವುದನ್ನು ಗುರುತಿಸಲಾಗುತ್ತದೆ ಎಂದು ವಿಶೇಷ ಆಯುಕ್ತರಾದ ರಂದೀಪ್ ಹೇಳಿದ್ದಾರೆ.