Wednesday, 11th December 2019

ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ: ಬಸವರಾಜ್ ಹೊರಟ್ಟಿ

ಬೆಳಗಾವಿ (ಚಿಕ್ಕೋಡಿ): ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿರುವ ಕಾರದಗಾ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಗಡಿ ಗ್ರಾಮದಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು  ಪಸರಿಸಿತ್ತು. ವಿವಿದ ವಾದ್ಯ ತಂಡಗಳ ಮೆರವಣಿಗೆ ಹಾಗೂ ಭುವನೇಶ್ವರಿ ಭಾವ ಚಿತ್ರದ ಮೆರವಣಿಗೆ ನಡೆಸಲಾಯಿತು. ಗಡಿ ಗ್ರಾಮದಲ್ಲಿ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸಮ್ಮೇಳನವನ್ನ ಆಯೋಜಿಸಲಾಗಿತ್ತು. ಗಡಿ ಸಮ್ಮೇಳನದ ಅಧ್ಯಕ್ಶತೆಯನ್ನ ಸಾಹಿತಿ ಚಂದ್ರಶೇಖರ ಪಾಟೀಲ(ಚಂಪಾ) ವಹಿಸಿದ್ದರು.

ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಮಾವೇಶದಲ್ಲಿ ಬಸವರಾಜ್ ಹೊರಟ್ಟಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಅನುಭವದ ಆಧಾರದ ಮೇಲೆ 20 ಜನ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ. ರಾಜಕೀಯದಿಂದ ನಿವೃತ್ತಿಯಾಗುವುದಿದ್ದರೆ ಮಾತ್ರ ರಾಜೀನಾಮೆ ನೀಡಬೇಕು. ಸರ್ಕಾರವನ್ನು ಅಭದ್ರಗೊಳಿಸುವ ನಿಟ್ಟಿನಲ್ಲಿ ರಾಜೀನಾಮೆ ಆಟ ಆಡುವುದು ಸರಿಯಲ್ಲ. ಸಿದ್ದರಾಮಯ್ಯ ಮಾಸ್ಟರ್ ಮೈಂಡ್ ಅಂತ ಹೇಳುವುದಿಲ್ಲ. ಬಹಳಷ್ಟು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಂತಾರೆ. ಹಾಗಾದ್ರೆ ಕುಮಾರಸ್ವಾಮಿ ಅವರ ಪರಿಸ್ಥಿತಿ ಏನು? ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಕಿಡಿಕಾರಿದ್ದಾರೆ.

ರಮೇಶ್ ಜಾರಕಿಹೊಳಿ ಮಾಡುತ್ತಿರುವುದು ಸರಿ ಕಾಣುತ್ತಿಲ್ಲ. ಮಂತ್ರಿಯಾಗಿ ಅವರು ಕೆಡಿಪಿ ಸಭೆ ಕರೆದಿಲ್ಲ, ಕ್ಯಾಬಿನೆಟ್‍ಗೆ ಹಾಜರಾಗಿಲ್ಲ. ಹಾಗಾಗಿ ಸಚಿವ ಸ್ಥಾನ ಕೈ ತಪ್ಪಿದೆ. ಅಲ್ಲದೇ ಜೆಡಿಎಸ್ ಪಕ್ಷದ ಬಿಜೆಪಿ ಸತ್ಯ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತು. ಯಾರ ಜೊತೆಗೆ ಯಾರು ಕೈ ಜೋಡಿಸುತ್ತಾರೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ಬೀಳುವ ಉಮೇಶ ಕತ್ತಿ ಹೇಳಿಕೆ ಹುಡುಗಾಟದ ಹೇಳಿಕೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಭಾಷಣ ಮಾಡುತ್ತ, ಮಹಾರಾಷ್ಟ್ರಕ್ಕೆ ಜೈ ಎನ್ನುವವರು ಬೆಳಗಾವಿಯಲ್ಲಿ ಶಾಸಕರಾಗುತ್ತಾರೆ. ಜನರು ಕನ್ನಡದಲ್ಲೇ ಮಾತನಾಡಿದರೂ ಸಹ ಅವರು ಮಾತ್ರ ಮರಾಠಿಯಲ್ಲಿಯೇ ಉತ್ತರಿಸುತ್ತಾರೆ ಎಂದು ವೇದಿಕೆಯ ಮೇಲೆಯೇ ಶಾಸಕ ಗಣೇಶ ಹುಕ್ಕೇರಿಗೆ ಬಸವರಾಜ್ ಹೊರಟ್ಟಿ ಅವರು ಟಾಂಗ್ ಕೊಟ್ಟಿದ್ದಾರೆ.

ಶಾಸಕ ಉಮೇಶ ಕತ್ತಿ, ವೀರಕುಮಾರ ಪಾಟೀಲ ಅಂತವರು ಮರಾಠಿಯಲ್ಲೇ ಮಾತನಾಡುತ್ತಾರೆ. ಹೀಗಾಗಿ ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿ ಆಗುತ್ತಿಲ್ಲ. ಕನ್ನಡ ಭಾಷೆಯನ್ನು ಶಾಲೆಯಲ್ಲಿ ಬಳಸುವಂತೆ ಕ್ರಮ ತೆಗೆದುಕೊಳ್ಳಿ. ಇಲ್ಲದೇ ಹೋದಲ್ಲಿ ಆಂಧ್ರದ ಗಡಿಗೆ ಎತ್ತಂಗಡಿ ಮಾಡಲಾಗುವುದು. ಕೂಡಲೇ ಕ್ರಮ ಕೈಗೊಳದೇ ಇದ್ರೆ ಕನ್ನಡಕ್ಕೆ ಒತ್ತು ಕೊಡದ ಶಾಲೆಗಳ ಅನುದಾನ ಕಡಿತ ಮಾಡಲಾಗುವುದು. ಅನುದಾನ ಕಡಿತಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ನಿಪ್ಪಾಣಿ ಬಿಇಒ ಕೆ. ರಾಮನಗೌಡಗೆ ಸಾರ್ವಜನಿಕರ ಎದುರಿನಲ್ಲಿಯೇ ಬಸವರಾಜ್ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *