Advertisements

ಯತ್ನಾಳರೇನು ಬಿಜೆಪಿ ಪಕ್ಷದ ಹೈಕಮಾಂಡಾ: ಬಿ.ಸಿ.ಪಾಟೀಲ್ ಪ್ರಶ್ನೆ

ಹಾವೇರಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಏನು ಬಿಜೆಪಿ ಹೈಕಮಾಂಡಾ ಎಂದು ಸಿಎಂ ಬದಲಾವಣೆ ಕುರಿತ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಖಾರವಾಗಿ ಪ್ರಶ್ನಿಸಿದ್ದಾರೆ.‌

Advertisements

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಬಳಿ ರೈತರ ಜಮೀನಿಗೆ ಭೇಟಿ ನೀಡಿ ಬಿ.ಸಿ.ಪಾಟೀಲ್ ಸಸಿಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ದಿನವೂ ಸಿಎಂ ಬದಲಾವಣೆ, ಮಂತ್ರಿಮಂಡಲ ಬದಲಾವಣೆ ಅನ್ನುತ್ತಾ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಆಡಳಿತವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿವೆ. ಶಾಸಕ ಯತ್ನಾಳರೇನು ಪಕ್ಷದ ಹೈಕಮಾಂಡಾ? ಯತ್ನಾಳ್‌ ಅವರು ಅಮಿತ್‌ ಶಾ ಅವರಿಗೆ ಸಮಾನವಾಗಿ ನಿಲ್ಲುತ್ತಾರಾ? ಅಮಿತ್‌ ಶಾ, ಅರುಣ್‌ ಸಿಂಗ್ ಅವರು ಹೇಳಿದರೆ ಅದಕ್ಕೊಂದು ಬೆಲೆ ಇದೆ. ಯತ್ನಾಳರಿಗೇನಾದ್ರೂ ಫೋನ್ ಮಾಡಿ ಹೇಳಿದ್ದಾರೋ ಗೊತ್ತಿಲ್ಲ. ನಾಲ್ಕೈದು ಸಚಿವ ಸ್ಥಾನಗಳು ಖಾಲಿ ಇವೆ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಯಾವಾಗ ವಿಸ್ತರಣೆ ಮಾಡುತ್ತಾರೋ ಅದು ಅವರ ಪರಮಾಧಿಕಾರ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

Advertisements

ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ಸರ್ಕಾರ ಬೇಗ ರಾಜೀನಾಮೆ ಕೊಡಬೇಕು, ತಾವು ಸಿಎಂ ಆಗಬೇಕು ಅನ್ನೋ ಹಂಬಲ, ಆಸೆಯಿದೆ. ಅದಕ್ಕಿಂತಲೂ ಹೆಚ್ಚಿನ ಹಂಬಲ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗಿದೆ ಎಂದು ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದಾರೆ.

ಎಲ್ಲದಕ್ಕೂ ರಾಜೀನಾಮೆ ಕೊಡಬೇಕು ಅಂತಾ ಹೇಳಿದರೆ ಹೇಗೆ? ಹಿಂದೆ ಕೆ.ಜೆ.ಜಾರ್ಜ್ ಪ್ರಕರಣ ಆದಾಗ‌ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟಿದ್ರಾ? ಸಚಿವ ಅಶ್ವಥ್ ನಾರಾಯಣ ಸಂಬಂಧಿಕರು ಯಾರೋ ಮಾಡಿದರು ಅಂತಾ ಅಶ್ವಥ್‌ ನಾರಾಯಣರನ್ನು ಹೊಣೆ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಬದಲಾವಣೆ ಎಂಬುದಿಲ್ಲ. ಅಮಿತ್‌ ಶಾ ಅವರು ಬಂದಾಗ ಸಿಎಂ ಬದಲಾವಣೆ ಕೂಗಿಲ್ಲ ಅಂತಾ ಹೇಳಿ ಹೋಗಿದ್ದಾರೆ. ಸಿಎಂ ಬದಲಾವಣೆ ಇಲ್ಲ ಅಂತಾ ಈಗಾಗಲೆ ಅರುಣ್‌ಸಿಂಗ್, ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅದರ ಬಗ್ಗೆ ನಿಮಗ್ಯಾಕೆ ಅಷ್ಟು ಆಸಕ್ತಿ ಇದೆ? ಬದಲಾವಣೆ ಇದ್ದರೆ ಕರೆದು ಹೇಳುತ್ತಾರೆ ಎಂದು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ‘ನಾಳೆ ಬಾ’ ಎಂಬಂತಿದೆ: ಅಭಯ್ ಪಾಟೀಲ್ ವ್ಯಂಗ್ಯ

Advertisements

Advertisements
Exit mobile version