Crime
ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ ಮಾಡುತ್ತಾರೆ ಎಂದು ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು

ಮಂಗಳೂರು: ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ ಮಾಡುತ್ತಾರೆ ಎಂದು ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಾರಾಡಿಯಲ್ಲಿ ನಡೆದಿದೆ.
ಪ್ರಾರ್ಥನಾ ಪ್ರಭು (52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟ ಮಹಿಳೆ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮೊದಲು ಮಹಿಳೆ ನನ್ನ ಸಾವಿಗೆ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮಾನಸಿಕ ಕಿರುಕುಳ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಮನೆಯ ಬೀಗ ಮುರಿದು ಮನೆ ಸೀಝ್ ಮಾಡಲು ಬ್ಯಾಂಕ್ ಸಿಬ್ಬಂದಿ ಬಂದಿದ್ದರು. ಇದರಿಂದ ಮನನೊಂದು ಪ್ರಾರ್ಥನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಮಹಿಳೆಯ ಪತಿ ರಘವೀರ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಘವೀರ್ ವಾಣಿಜ್ಯ ಉದ್ಧೇಶಕ್ಕಾಗಿ ಸಾಲ ಮಾಡಿದ್ದರು. 30 ಕೋಟಿಗೂ ಮಿಕ್ಕಿದ ಸಾಲ ಮರುಪಾವತಿ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ ಬ್ಯಾಂಕ್ ನಿಂದ ಏಕಾಏಕಿ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
