Bengaluru City
ನಿಮ್ಮ ತಂದೆಯವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ – ಹೆಚ್ಡಿಕೆಗೆ ಡಿಕೆಶಿ ತಿರುಗೇಟು

ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿಯವರೇ ನಿಮ್ಮ ತಂದೆಯನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್, ನಿಮ್ಮನ್ನು ಎರಡನೇ ಬಾರಿ ಸಿಎಂ ಮಾಡಿದ್ದು ಕಾಂಗ್ರೆಸ್ ಎಂಬುವುದನ್ನು ಎಂದಿಗೂ ನೆನೆಪಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರೇ ನಾನು ಹಸಿರು ಟವಲ್ನನ್ನು ಹೆಗಲ ಮೇಲೆ ಹಾಕಿಕೊಂಡು ರೈತರ ಹೋರಾಟಕ್ಕೆ ಹೋಗಿದ್ದಕ್ಕೆ ಕಾಂಗ್ರೆಸ್ ಶಾಲುಗೆ ಬೆಲೆಯಿಲ್ಲ ಅಂತ ಹೇಳ್ತೀರಾ ನೆನಪಿಟ್ಟುಕೊಳ್ಳಿ. ನಿಮ್ಮ ತಂದೆಯನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್. ನಿಮ್ಮನ್ನು ಎರಡನೇ ಬಾರಿ ಸಿಎಂ ಮಾಡಿದ್ದು ಕಾಂಗ್ರೆಸ್. ಅಂತಹದರಲ್ಲಿ ಕಾಂಗ್ರೆಸ್ ಶಾಲು ವ್ಯಾಲ್ಯೂ ಇಲ್ಲ ಅಂತೀರಾ? ನಾನು ಇಷ್ಟು ದಿನ ತಾಳ್ಮೆಯಿಂದ ಇದ್ದೆ, ಇನ್ನೂ ಸುಮ್ಮನಿರುವುದಿಲ್ಲ. ನೀವು ನನ್ನ ವಿರುದ್ಧ ವೈಯಕ್ತಿಕವಾಗಿ ಬೇಕಾದರೆ ಮಾತನಾಡಿದರೂ ಸಹಿಸಿಕೊಳ್ಳುತ್ತಿದ್ದೆ. ಆದ್ರೆ ಪಕ್ಷದ ವಿರುದ್ಧ ಮಾತನಾಡಿದರೆ ಪಕ್ಷದ ಅಧ್ಯಕ್ಷನಾಗಿ ನಾನು ಸಹಿಸುವುದಿಲ್ಲ ಎಂದು ಹೆಚ್ಡಿಕೆ ವಿರುದ್ಧ ಡಿಕೆಶಿ ಹರಿಹಾಯ್ದರು.
ಬಿಜೆಪಿಯವರೇ ಗೋಹತ್ಯೆ ಕಾನೂನನ್ನು 1968 ರಲ್ಲಿಯೇ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿವೆ. ನೀವು ಒಂದು ವರ್ಗ ಮತ್ತು ಜಾತಿನ ಮಾತ್ರ ನಂಬಿಕೊಂಡಿದ್ದೀರಾ. ಆದ್ರೆ ನಾವು ನಿಮ್ಮ ಹಾಗೆ ಒಂದು ಜಾತಿ, ಧರ್ಮವನ್ನು ನಂಬಿಕೊಂಡಿಲ್ಲ. ಎಲ್ಲ ಜಾತಿಯವರು ಹಸುವನ್ನು ಸಾಕುತ್ತಿದ್ದಾರೆ. ಕೊರೊನಾ ರೋಗ ಬಂದಿದೆ ಎಂದು ವಯಸ್ಸಾದ ನಿಮ್ಮ ತಂದೆ-ತಾಯಿಯನ್ನು ಹೊರಗಡೆ ಕಳುಹಿಸುತ್ತೀರಾ? ಹಾಗೆಯೇ ನಾವು ರೈತರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ನಾವು ಯಾರು ಹಸು, ಕರುಗಳನ್ನ ಸಾಕಿಲ್ವಾ? ರೈತರಿಗೂ ಅನುದಾನ ಕೊಡಿ. ಇಲ್ಲವಾದ್ದಲ್ಲಿ ನಿಮ್ಮ ಮನೆ ಬಾಗಿಲಿಗೆ ಹಸುಗಳನ್ನು ತಂದು ಬಿಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಇಂದು ಐತಿಹಾಸಿಕ ದಿನ. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ಪುಣ್ಯ. ಬಹಳಷ್ಟು ಜನ ಮೇಧಾವಿಗಳು ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಭಾರತವನ್ನು ಹೇಗೆ ಅಭಿವೃದ್ಧಿ ಪಡಿಸಿ ಮುಂದಕ್ಕೆ ತೆಗೆದುಕೊಂಡು ಹೋಗಿದ್ದೇವೆ ಎಂದು ಕಾಂಗ್ರೆಸ್ನ ನಮ್ಮ ನಾಯಕರು ನಮಗೆ ತಿಳಿಸಿದ್ದಾರೆ. ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುವ ಭಾಗ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೆ ಎಂದರು.
