Districts
ಸೋಮವಾರ ಕೊಡಗು ಬಂದ್ಗೆ ನಿರ್ಧಾರ
ಮಡಿಕೇರಿ: ಕೇಂದ್ರ ಸರ್ಕಾರದ ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ವಿರೋಧಿಸಿ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ ಯಶಸ್ವಿಗೆ ಕೊಡಗಿನಲ್ಲಿ ಹಲವು ಸಂಘಟನೆಗಳು ಕೈ ಜೋಡಿಸಿವೆ.
ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಸೇರಿದ ರೈತ ಸಂಘಟನೆ, ದಲಿತ ಸಂಘಟನೆ, ಎಸ್ಡಿಪಿಐ, ಭಾರತೀಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕಾರ್ಮಿಕ ಸಂಘಟನೆ, ಕಮ್ಯುನಿಸ್ಟ್ ಹಾಗೂ ಮಾರ್ಕ್ವಾದಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಸೋಮವಾರ ಕೊಡಗು ಜಿಲ್ಲಾ ಬಂದ್ ಬಗ್ಗೆ ಸಮಾಲೋಚನೆ ನಡೆಸಿದರು.
ಬಳಿಕ ಸೆಪ್ಟೆಂಬರ್ 28 ರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕೊಡಗಿನ ಗಡಿ ಭಾಗ ಸಂಪಾಜೆ ಕುಶಾಲನಗರ ಹಾಗೂ ಮಡಿಕೇರಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುವುದು. ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಷೋಷಣೆ ಕೂಗುವುದಕ್ಕೆ ಒಮ್ಮತದಿಂದ ನಿರ್ಧಾರವನ್ನು ಕೈಗೊಂಡರು.
ಕೇಂದ್ರ ಸರ್ಕಾರ ರೈತರು, ಕಾರ್ಮಿಕರು ಹಾಗೂ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಜಾರಿಗೆ ತಂದಿರುವ ಕಾಯ್ದೆಗಳು ಮರಣ ಶಾಸನವನ್ನು ಬರೆದಂತಿವೆ. ಕಾಯ್ದೆಗಳನ್ನು ಜಾರಿಗೆ ತಂದು ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದೆ. ಸ್ಥಳೀಯ ಶಾಸಕರು ಹಿಂದೆ ಭೂಮಿ ಮಾರಾಟ ಮಾಡಬೇಡಿ ಎನ್ನುತ್ತಿದ್ದರು ಇದೀಗ ಭೂಮಿ ಮಾರಾಟ ಮಾಡುವಂತೆ ಹೇಳುತ್ತಿದ್ದಾರೆ ಎಂದು ಇದೇ ಸಂದರ್ಭ ಆರೋಪಿಸಿದರು.