Tuesday, 18th June 2019

ಬಿಜೆಪಿ ಶಾಸಕರೇ ನಮ್ಮ ಕಡೆ ಬರ್ತಾರೆ : ಬಂಡೆಪ್ಪ ಕಾಶೆಂಪುರ

ವಿಜಯಪುರ: ಬಿಜೆಪಿ ನಾಯಕರಿಗೆ ತಮ್ಮ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಅಂತ ಭಯ ಶುರುವಾಗಿದೆ. ಆದರಿಂದ ಆಪರೇಷನ್ ಕಮಲ, ಜೆಡಿಎಸ್- ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ತಾರೆ ಅಂತ ಹುಸಿಬಾಂಬ್ ಹಾಕ್ತಾರೆ ಅಷ್ಟೇ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನು ಸ್ವಲ್ಪದಿನದಲ್ಲಿ ಮೈತ್ರಿ ಸರ್ಕಾರ ಸ್ಥಿರವಾಗಿ ನಡೆಯುತ್ತಿದೆ ಅಂತ ಅರ್ಥವಾದ ಮೇಲೆ ಬಿಜೆಪಿ ಶಾಸಕರೇ ನಮ್ಮ ಕಡೆ ಬರ್ತಾರೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸುಮ್ಮನೆ ನಮ್ಮ ಸರ್ಕಾರದ ಮೇಲೆ ಬಿಜೆಪಿ ಅವರು ಸುಳ್ಳು ಆರೋಪ ಮಾಡ್ತಾರೆ. ಪ್ರಧಾನಿ ಮೋದಿ ಅವರು ಸುಳ್ಳು ಮಾಹಿತಿ ನಂಬಿ ಕಾಂಗ್ರೆಸ್ ಅವರು ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್ ರೀತಿ ನೋಡುತ್ತಿದ್ದಾರೆ ಅಂತ ಹೇಳಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

ಸಚಿವ ಎಂ.ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಬ್ಬರು ಹಿರಿಯರು, ದೊಡ್ಡವರ ಬಗ್ಗೆ ನಾನೇನು ಮಾತನಾಡಲ್ಲ ಎಂದರು.

ಮುಂಬರುವ ಬಜೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಅವರಿಂದ ಭರ್ಜರಿ ದಾಖಲೆ ಪ್ರಮಾಣದ ಕೊಡುಗೆ ಇದೆ. ಅಲ್ಲದೆ ಸಾಲಮನ್ನಾ ವಿಷಯದಲ್ಲಿ ಯಾವ ರೈತರಿಗೂ ನೋಟಿಸ್ ನೀಡಿಲ್ಲ. ಸಾಲಮನ್ನಾದ ಯೋಜನೆಯಿಂದ ಅನರ್ಹರಿಗೆ ಲಾಭವಾಗುವುದು ತಪ್ಪಲಿ ಎನ್ನುವ ಉದ್ದೇಶದಿಂದ ರೈತರಿಂದ ದಾಖಲೆಗಳ ಸಂಗ್ರಹ ಕಾರ್ಯವನ್ನು ನಡೆಸುತ್ತಿದ್ದೇವೆ. ಸರ್ಕಾರ ಫಸ್ಟ್ ಕ್ಲಾಸ್ ಆಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು.

ಹಾಗೆಯೇ ಕಾಂಗ್ರೆಸ್ ಜೆಡಿಎಸ್‍ನ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಇದೆಲ್ಲ ಬಿಜೆಪಿಯವರ ಹುಸಿಬಾಂಬ್ ಅಷ್ಟೇ. ಏಳು ತಿಂಗಳಿನಿಂದ ಬಿಜೆಪಿಯವರು ಹಾಕುತ್ತಿರುವ ಎಲ್ಲ ಬಾಂಬ್‍ಗಳು ಠುಸ್ ಆಗಿವೆ. ಬಿಜೆಪಿಗರು ಅಸ್ತಿತ್ವ ಕಳೆದುಕೊಳ್ಳುವ ಭೀತಿ ಶುರುವಾಗಿದೆ ಅದಕ್ಕೆ ಹೀಗೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ಸ್ವಲ್ಪ ಹೊಂದಾಣಿಕೆ ಕೊರತೆ ಇದೆ. ಅದನ್ನು ಸರಿಪಡಿಸಿಕೊಳ್ಳಲಾಗುತ್ತದೆ ಎಂದು ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಇರುವುದನ್ನ ಪರೋಕ್ಷವಾಗಿ ಬಂಡೆಪ್ಪ ಕಾಶೆಂಪುರ ಅವರು ಒಪ್ಪಿಗೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *