Friday, 22nd November 2019

Recent News

ತಾಜ್ ಮಹಲ್ ನಲ್ಲಿ ನಮಾಜ್ ನಿಷೇಧಿಸಿ ಇಲ್ಲವೇ ಪ್ರಾರ್ಥನೆಗೆ ಹಿಂದೂಗಳಿಗೂ ಅವಕಾಶ ಕೊಡಿ: ಆರ್‍ಎಸ್‍ಎಸ್ ಅಂಗಸಂಸ್ಥೆ

ನವದೆಹಲಿ: ಆಗ್ರಾದಲ್ಲಿರೋ ಪುರಾತನ ಹಾಗೂ ಪ್ರಸಿದ್ಧ ಸ್ಮಾರಕ ತಾಜ್ ಮಹಲ್ ನಲ್ಲಿ ಶುಕ್ರವಾರ ನಡೆಯೋ ನಮಾಜನ್ನು ನಿಷೇಧಿಸಬೇಕು ಅಂತ ಆರ್‍ಎಸ್‍ಎಸ್ ಅಂಗಸಂಸ್ಥೆಯೊಂದು ಇದೀಗ ಆಗ್ರಹಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ತಾಜ್ ಮಹಲ್ ಒಂದು ರಾಷ್ಟ್ರೀಯ ಪರಂಪರೆಯ ಧ್ಯೋತಕವಾಗಿದೆ. ಮುಸ್ಲಿಮರು ಇದನ್ನು ಧಾರ್ಮಿಕ ಸ್ಥಳವನ್ನಾಗಿ ಮಾಡಿದ್ದಾರೆ. ಆದ್ರೆ ಇದು ಒಂದು ಪಾರಂಪರಿಕ ಸ್ಥಳವವಾಗಿ ಉಳಿಯೋಕೆ ಅಲ್ಲಿ ಮಾಡುವ ನಮಾಜ್ ಅನ್ನು ರದ್ದುಗೊಳಿಸಬೇಕು. ಇಲ್ಲವೆಂದಲ್ಲಿ ಹಿಂದೂಗಳಿಗೂ ಅಲ್ಲಿ ಶಿವನ ಪ್ರಾರ್ಥನೆ ಮಾಡಲು ಅವಕಾಶ ಕೊಡಿ ಅಂತ ಅಖಿಲ ಭಾರತೀಯ ಇತಿಹಾಸ್ ಸಂಕಲನ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಾ. ಬಾಲ್ಮುಕುಂದ್ ಪಾಂಡೆ ಆಗ್ರಹಿಸಿದ್ದಾರೆ.

ಟಿವಿ ವಾಹಿನಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪಾಂಡೆ ಅವರು, ಇಷ್ಟು ದಿನ ತಾಜ್ ಮಹಲ್ ನಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಇನ್ಮುಂದೆ ಈ ಅವಕಾಶವನ್ನು ಹಿಂತೆಗೆದುಕೊಳ್ಳಬೇಕು. ಒಂದು ವೇಳೆ ನಮಾಜ್ ನಿಲ್ಲಿಸಲು ಸಾಧ್ಯವಾಗದಿದ್ದರೆ, ಹಿಂದೂಗಳಿಗೂ ಶಿವನ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.

ತಾಜ್ ಮಹಲಿನಲ್ಲಿ ಪ್ರತೀ ಶುಕ್ರವಾರ ನಮಾಜ್ ನಡೆಯುತ್ತದೆ. ಆ ವಾರದಂದು ಪ್ರವಾಸಿಗರಿಗೆ ಇಲ್ಲಿ ಪ್ರವೇಶವಿರುವುದಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ತಾಜ್ ಮಹಲ್ ನ ಒಳಗೆ ಶಿವ ಚಾಲಿಸ ಮಂತ್ರ ಪಠಿಸಲು ಯತ್ನಿಸಿದ್ದರು. ಈ ವೇಳೆ ಅಲ್ಲಿಯ ಭದ್ರತಾ ಸಿಬ್ಬಂದಿ ಇದನ್ನು ತಡೆದಿದ್ದರು.

ಇತ್ತೀಚೆಗಷ್ಟೇ ಬಿಜೆಪಿ ಶಾಸಕ ಸರ್ಧಾನಾ ಅವರು ತಾಜ್ ಮಹಲನ್ನು ದ್ರೋಹಿಗಳು ನಿರ್ಮಿಸಿದ್ದಾರೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದ್ರೆ ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಅಂತ ಬಿಜೆಪಿ ಹೇಳಿತ್ತು.

ಗುರುವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಜ್ ಮಹಲ್‍ಗೆ ಭೇಟಿ ನೀಡಿ ಪೊರಕೆ ಹಿಡಿದು ಸ್ವಚ್ಛ ಮಾಡುವ ಮೂಲಕ ವಿವಾದವನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದರು. ಇದಕ್ಕೂ ಮೊದಲು ಯೋಗಿ ಆದಿತ್ಯಾನಾಥ್, ತಾಜ್‍ಮಹಲ್ ನಿರ್ಮಾಣದ ಹಿಂದೆ ಸಾವಿರಾರು ಭಾರತೀಯರ ಶ್ರಮ ಮತ್ತು ಬೆವರು ಇದೆ. ಪ್ರಾವಸೋದ್ಯಮದ ನಿಟ್ಟಿನಲ್ಲಿ ತಾಜ್ ಮಹಲನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ಮೊಘಲರ ದೊರೆ ಶಾಜಹಾನ್ ಅವರು 17ನೇ ಶತಮಾನದಲ್ಲಿ ಆಗ್ರಾದ ಬಳಿ ತನ್ನ ಪತ್ನಿ ಮುಮ್ತಾಜ್ ಗಾಗಿ ಕಟ್ಟಿಸಿದ ಸಮಾಧಿಯೇ ತಾಜ್ ಮಹಲ್. ಈ ಆವರಣದಲ್ಲಿ ಒಂದು ಮಸೀದಿಯೂ ಇದೆ. ಆದರೆ, ಕೆಲ ಇತಿಹಾಸಕಾರರ ಪ್ರಕಾರ ತಾಜ್ ಮಹಲ್ ಹಿಂದೆ ಶಿವನ ದೇವಾಲಯವಾಗಿತ್ತು ಎನ್ನಲಾಗಿದೆ. ಹಿಂದೂ ದೇಗುಲವನ್ನು ಒಡೆದು ಅಲ್ಲಿ ತಾಜ್ ಮಹಲ್ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಈಗಲೂ ಶಿವಲಿಂಗವಿದೆ ಎಂಬ ವಾದವಿದೆ.

Leave a Reply

Your email address will not be published. Required fields are marked *