ಬಾಗಲಕೋಟೆ: ರಾಮಮಂದಿರ ನಿರ್ಮಾಣದವರೆಗೆ ಕೇಶ ತೆಗೆಯೋದಿಲ್ಲ ಎಂದು ದೀಕ್ಷೆ ತೆಗೆದುಕೊಂಡಿದ್ದಾರಾ ಮೋದಿ ಎಂಬ ಪ್ರಶ್ನೆಗೆ ಸದ್ಯ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಗೆ ಆಗಮಿಸಿದ್ದ ಪೇಜಾವರ ಶ್ರೀಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮಂದಿರ ನಿರ್ಮಾಣಕ್ಕೆ ಕಾಣಿಕೆ ಸಂಗ್ರಹಣೆಗೆ ಚಾಲನೆ ನೀಡಿದರು. ನಂತರ ಮಾಧ್ಯಮದವರ ಜೊತೆ ಮಾತನಾಡುತ್ತಾ, ಪ್ರಧಾನಿ ಮೋದಿ ದೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮಲ್ಲಿ ದೇವಸ್ಥಾನದ ಕಾರ್ಯ ಇಂತಹದ್ದೆಲ್ಲ ಇರುತ್ತೆ, ಆ ಹೊತ್ತಿಗೆ ನಾವು ದೀಕ್ಷಾ ಬದ್ಧರಾಗೋದು ಅಂತ ಇದೆ. ಅದೇ ರೀತಿ ಮೋದಿ ಅವರು ರಾಮಮಂದಿರ ಕಾರ್ಯಕ್ಕಾಗಿ ದೀಕ್ಷೆ ತೊಟ್ಟಿದ್ದಾರೆಂದು ಊಹಿಸಿದರು.
ಮೋದಿಯವರು ರಾಮಮಂದಿರಕ್ಕೆ ಶಿಲಾನ್ಯಾಸವನ್ನು ಮಾಡಿದ್ದಾರೆ. ಮಂದಿರದ ಸಂಪೂರ್ಣ ಜವಾಬ್ದಾರಿಯನ್ನ ಪ್ರಧಾನಿಯವರು ಹೊತ್ತಿರೋದ್ರಿಂದ, ಸಹಜವಾಗಿ ಇಂತಹ ಕಾರ್ಯದ ವೇಳೆ ನಮ್ಮಲ್ಲಿ ಕೇಶಾದಿಗಳನ್ನು ತೆಗೆಯೋದಿಲ್ಲ. ನೈತಿಕ ನೆಲೆಯಲ್ಲಿ ನಮ್ಮಲ್ಲಿ ಮಂದಿರ ಆಗುವ ತನಕ ಗಡ್ಡ, ತಲೆಗೂದಲು ಬಿಟ್ಟಿರುತ್ತೇವೆ. ಪ್ರಾಯಶಃ ಮೋದಿ ಅವರು ಅದನ್ನು ಪಾಲನೆ ಮಾಡಿರಬಹುದು ಎಂದು ಶ್ರೀಗಳು ಹೇಳಿದರು. ಅಲ್ಲದೆ ಮೋದಿಯವರು ಆಧ್ಯಾತ್ಮಿಕವಾಗಿದ್ದಾರೆ. ಹಾಗಾಗಿ ಅವರು ಕೇಶ ತೆಗೆಯದೇ ಇರುವುದರಲ್ಲಿ ತಪ್ಪೇನಿಲ್ಲವಲ್ಲ ಎಂದ ಶ್ರೀಗಳು ಪುನರುಚ್ಛರಿಸಿದರು.
ಇದೇ ವೇಳೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ಕಾಗಿ ಕಾಣಿಕೆ ಸಂಗ್ರಹಣೆ ಕಾರ್ಯ ಶೀಘ್ರದಲ್ಲೇ ಶುರುವಾಗಲಿದೆ. ಇದರ ಉಸ್ತುವಾರಿಯನ್ನ ವಿಶ್ವಹಿಂದೂಪರಿಷತ್ ಗೆ ವಹಿಸಲಾಗಿದೆ. ಮಂದಿರ ನಿರ್ಮಾಣ ಆಗುವ ಜಾಗ ಮರಳುಮಿಶ್ರಿತ ಮಣ್ಣಿನಿಂದ ಕೂಡಿದೆ. ಇತ್ತ ಕಲ್ಲಿನ ಮಂದಿರ ಆಗೋದ್ರಿಂದ, ಅದರ ಭಾರವನ್ನು ಮಣ್ಣು ಹೊರುತ್ತಾ ಎಂಬ ಬಗ್ಗೆ ಮಣ್ಣಿನ ಪರೀಕ್ಷೆ ನಡೆದಿದೆ. ಮಂದಿರ ನಿರ್ಮಾಣಕ್ಕೆ ಸುಮಾರು ಸಾವಿರದ ಐನೂರು ಕೋಟಿ ಅಂದಾಜಿನ ಬಜೆಟ್ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.