Bagalkot
ಇಳಕಲ್ನಲ್ಲಿ ಭಾರೀ ಅಗ್ನಿ ಅವಘಡ – 17 ಅಂಗಡಿಗಳು ಭಸ್ಮ

– ಕಣ್ಣೆದುರೇ ಬೆಂಕಿಗಾಹುತಿಯಾದ ಬಿಲ್ಡಿಂಗ್, 20 ಕೋಟಿ ನಷ್ಟ
ಬಾಗಲಕೋಟೆ: ಶಾರ್ಟ್ ಸರ್ಕ್ಯೂಟ್ ನಿಂದಾಗಿ 5 ಅಂತಸ್ತಿನ ವಾಣಿಜ್ಯ ಮಳಿಗೆ ಅಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.
ಇಳಕಲ್ ನ ಬಸವೇಶ್ವರ ಸರ್ಕಲ್ ನಲ್ಲಿ ಇರುವ ಚಂದ್ರಶೇಖರ್ ಸಜ್ಜನ ಎಂಬವರಿಗೆ ಸೇರಿದ ಶಾಪಿಂಗ್ ಸೆಂಟರ್ ಬೆಂಕಿಯ ಕೆನ್ನಾಲಿಗೆಯಿಂದ ಹೊತ್ತಿ ಉರಿದು ಭಾರೀ ಪ್ರಮಾಣದ ಅಗ್ನಿ ಉಂಟಾಗಿದೆ. ಗುಳೇದಗುಡ್ಡ, ಕುಷ್ಟಗಿ, ಇಳಕಲ್, ಹುನಗುಂದ, ಬಾಗಲಕೋಟೆ ಭಾಗದಿಂದ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಿವೆ.
ಒಟ್ಟು 4 ಅಂತಸ್ತಿನ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ಮೋರ್ ಸೂಪರ್ ಮಾರ್ಕೆಟ್, ಹಾರ್ಡ್ವೇರ್ ಅಂಗಡಿ, ಬೇಕರಿ, ಇಳಕಲ್ ಸೀರೆ ಅಂಗಡಿ, ಪೀಟರ್ ಇಂಗ್ಲಂಡ್ ಬಟ್ಟೆ ಷೋರೂಮ್ ಸೇರಿ 17 ಮಳಿಗೆಗಳನ್ನು ಬಾಡಿಗೆ ಕೊಡಲಾಗಿತ್ತು. ಬೆಂಕಿ ಕೆನ್ನಾಲಿಗೆಗೆ ಎಲ್ಲ ಶಾಪ್ ಗಳು ಸುಟ್ಟು ಭಸ್ಮ ಆಗಿವೆ.
ಬಿಲ್ಡಿಂಗ್ ನಲ್ಲಿದ್ದ ಹಾರ್ಡವೇರ್ ಅಂಗಡಿಯಲ್ಲಿ ಉಂಟಾದ ಶಾರ್ಟ್ ಸಕ್ರ್ಯೂಟ್ ನಿಂದ ಈ ಅಗ್ನಿ ಅವಘಡ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳ್ತಿದ್ರೆ, ಘಟನೆಯಿಂದ 20 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇಡೀ ಕಟ್ಟಡ ಬೆಂಕಿಗಾಹುತಿಯಾಗಿದ್ದನ್ನು ಕಂಡ ಮಾಲೀಕ ದಿಕ್ಕು ತೋಚದಂತಾಗಿ ಕುಳಿತಿದ್ದಾರೆ. ಅಲ್ಲದೇ ಸಾಕಷ್ಟು ಕನಸು ಕಂಡು ಈ ಬಿಲ್ಡಿಂಗ್ ಕಟ್ಟಿದ್ರು. ಕನಸೆಲ್ಲವೂ ಈಗ ಸುಟ್ಟು ಕರಕಲಾಗಿದೆ.
ಸದ್ಯ ಸ್ಥಳದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಠಿಕಾಣಿ ಹೂಡಿ ಬೆಂಕಿಯನ್ನು ನಂದಿಸಿದ್ದಾರೆ. ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
