Bagalkot
ಮನೆ, ದೇವಾಲಯಗಳಲ್ಲಿ ಬಿರುಕು – ಗಣಿಗಾರಿಕೆಗೆ ಬೆದರಿದ ಗುಂಡನಪಲ್ಲಿ ಗ್ರಾಮಸ್ಥರು..!

ಬಾಗಲಕೋಟೆ: ಶಿವಮೊಗ್ಗದ ಬ್ಲಾಸ್ಟ್ ಗೆ ಅಕ್ಕಪಕ್ಕದ 4 ಜಿಲ್ಲೆಗಳು ಬೆದರಿತ್ತು. ಈಗ ಸ್ವತಃ ಗಣಿ ಸಚಿವರ ತವರು ಜಿಲ್ಲೆಯೇ ಅಪಾಯಕ್ಕೆ ಆಹ್ವಾನ ಕೊಡುವಂತಿದೆ.
ಹೌದು. ಶಿವಮೊಗ್ಗದ ಹುಣಸೋಡಿನಲ್ಲಿ ಸಂಭವಿಸಿದ ಸ್ಫೋಟ ಮಾಸುವ ಬೆನ್ನಲ್ಲೇ ಕರುನಾಡಿಗೆ ಮತ್ತೊಂದು ಆತಂಕ ಎದುರಾಗಿದೆ. ಗಣಿ ಸಚಿವರ ತವರು ಜಿಲ್ಲೆಯೇ ಮತ್ತೊಂದು ಅಪಾಯಕ್ಕೆ ಆಹ್ವಾನ ಕೊಡುವಂತಿದೆ. ಪ್ರತಿನಿತ್ಯ ನಡೀತಿರೋ ಗಣಿಗಾರಿಕೆಯಿಂದ ಈ ಗ್ರಾಮ ಅಕ್ಷರಶಃ ನಲುಗಿ ಹೋಗಿದೆ. ಜನರ ಬದುಕು ಬೀದಿಗೆ ಬಿದ್ದಿದೆ.
ಗಣಿ ಸಚಿವ ಮುರುಗೇಶ್ ನಿರಾಣಿ ತವರು ಜಿಲ್ಲೆ ಬಾಗಲಕೋಟೆಯ ಗುಂಡನಪಲ್ಲಿ ಗ್ರಾಮದಲ್ಲಿ ಹಿರಿಜೀವಗಳು ಮನೆಯೊಳಗೆ ಇರೋಕೆ ಆಗದೆ ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯದಲ್ಲೇ ದಿನದೂಡ್ತಿದ್ದಾರೆ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಗಣಿಗಾರಿಕೆ ನಡೀತಿದೆ. ಗಣಿಗಾರಿಕೆಯ ಭೀಕರ ಸ್ಫೋಟಕ್ಕೆ ಮನೆಗಳ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ರೆ, ಗ್ರಾಮದಲ್ಲಿರುವ ದೇವಸ್ಥಾನದ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಗ್ರಾಮದಲ್ಲಿರೋ ರಸ್ತೆಯ ಮೂಲಕವೇ ಸ್ಪೋಟಕ್ಕೆ ವಸ್ತುಗಳನ್ನೂ ಕೊಂಡೊಯ್ಯುತ್ತಿರೋದು ಆತಂಕಕ್ಕೆ ಈಡುಮಾಡಿದೆ.
ಗಣಿಗಾರಿಕೆಯಿಂದಾಗಿ ಅಂತರ್ಜಲವೇ ಬತ್ತಿ ಹೋಗಿದೆ. ಅಕ್ಕಪಕ್ಕದ ಬಹುತೇಕ ಹೊಲಗದ್ದೆಗಳಲ್ಲಿನ ಬೋರವೆಲ್ಗಳು ಬತ್ತಿ ಹೋಗಿದ್ದು, ನೀರಿಗಾಗಿ ಜನ ಪರದಾಡುವಂತಾಗಿದೆ. ಬೆಳೆಗಳಿಗೂ ಧೂಳಿನಿಂದ ಪರಿಣಾಮ ಉಂಟಾಗ್ತಿರೋದಲ್ಲದೆ, ಗ್ರಾಮಸ್ಥರ ಆರೋಗ್ಯ ದಿನೇ ದಿನೇ ಹದಗೆಡ್ತಿದೆ. ಇಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಸದ್ಯ ಕೊರೊನಾ ಮಧ್ಯೆ ಜನರನ್ನ ಗಣಿಗಾರಿಕೆ ಕಾಡ್ತಿದ್ದು, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸಚಿವರು ಕ್ರಮಕೈಗೊಳ್ತಾರಾ ಅನ್ನೋದೆ ಪ್ರಶ್ನೆಯಾಗಿದೆ.
